ಮೊಸಳೆ ದಾಳಿಯಲ್ಲಿ ಬಚಾವಾದ 14ರ ಬಾಲಕನ ಸಾಹಸಗಾಥೆ...

ಕೇಂದ್ರಪಾರ: ಒಡಿಶಾದ ಕೇಂದ್ರಪಾರ ಜಿಲ್ಲೆಯ ನದಿಬದಿಯ ಗ್ರಾಮವೊಂದರ 14 ವರ್ಷದ ಬಾಲಕ ಮೊಸಳೆ ದಾಳಿಯಲ್ಲಿ ಪವಾಡಸದೃಶವಾಗಿ ಬಚಾವಾದ ಸ್ವಾರಸ್ಯಕರ ಘಟನೆ ವರದಿಯಾಗಿದೆ.
ಮೊಸಳೆ ಜತೆಗೆ 10 ನಿಮಿಷ ಕೆಚ್ಚಿನಿಂದ ಹೋರಾಡಿ, ಕೊನೆಗೂ ಮೊಸಳೆ ಹಿಡಿತದಿಂದ ತಪ್ಪಿಸಿಕೊಂಡಿದ್ದಾನೆ.
ಓಂ ಪ್ರಕಾಶ್ ಸಾಹೂ ಎಂಬ ಬಾಲಕ ಸ್ನೇಹಿತರ ಜತೆ ಅರಜಿ ಗ್ರಾಮ ಸಮೀಪದ ಕನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಏಳು ಅಡಿಯ ಮೊಸಳೆ ಪ್ರತ್ಯಕ್ಷವಾಗಿ ಆತನನ್ನು ಎಳೆದುಕೊಂಡು ಹೋಯಿತು. ಆದರೆ ತನ್ನ ಜೀವ ಉಳಿಸಿಕೊಳ್ಳಲು ಬಾಲಕ ಸಾಹಸದಿಂದ ಮೊಸಳೆ ಜತೆ ಹೋರಾಡಿದ.
ಈ ಹಠಾತ್ ದಾಳಿಯಿಂದಾಗಿ ಬಾಲಕನಿಗೆ ಪ್ರತಿಕ್ರಿಯಿಸಲು ಯಾವ ಅವಕಾಶವೂ ಇರಲಿಲ್ಲ. ಆದರೆ ಸಾವಿನ ದವಡೆಯಿಂದ ಬಚಾವಾಗಲು ಕೊನೆಕ್ಷಣದಲ್ಲಿ ಹೋರಾಡಲು ಮುಂದಾದ ಬಾಲಕ ಮೊಸಳೆಯ ಹಣೆ ಮತ್ತು ಕಣ್ಣಿನ ಮೇಲೆ ಬಲವಾಗಿ ಗುದ್ದಿದ. ಬಾಲಕನ ಪ್ರಯತ್ನ ಕೊನೆಯೂ ಫಲ ನೀಡಿತು. ಮೊಸಳೆ ಬಿಗಿಹಿಡಿತ ಸಡಿಲಿಸಿ ಆತನನ್ನು ಬಿಟ್ಟಿತು ಎಂದು ಬಾಲಕನ ಸಂಬಂಧಿಕರು ಹೇಳಿದ್ದಾರೆ.
ಮೊದಲು ಬಾಲಕನನ್ನು ಕೇಂದ್ರಪಾರ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಕಟಕ್‍ನ ಎಸ್‍ಸಿಬಿ ಮೆಡಿಕಲ್ ಕಾಲೇಜ್‍ಗೆ ವರ್ಗಾಯಿಸಲಾಗಿದೆ. ಬಾಲಕನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.







