Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತಂಬಾಕು ಮುಕ್ತ ಭಾರತವಾಗಲಿ

ತಂಬಾಕು ಮುಕ್ತ ಭಾರತವಾಗಲಿ

ಇಂದು ವಿಶ್ವ ತಂಬಾಕು ರಹಿತ ದಿನ

ಡಾ. ಮುರಲೀ ಮೋಹನ್,  ಚೂಂತಾರುಡಾ. ಮುರಲೀ ಮೋಹನ್, ಚೂಂತಾರು31 May 2022 11:04 AM IST
share
ತಂಬಾಕು ಮುಕ್ತ ಭಾರತವಾಗಲಿ

ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಎಂದು ಆಚರಿಸಲಾಗುತ್ತಿದೆ. ಈ ಆಚರಣೆಯಲ್ಲಿ ಪ್ರತೀ ವರ್ಷ ಏನಾದರೊಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು, ತಂಬಾಕು ಉತ್ಪನ್ನಗಳ ಬಳಕೆಯಿಂದ ಉಂಟಾಗುವ ಸಾವು-ನೋವು, ರೋಗ, ರುಜಿನ, ದುಗುಡ ದುಮ್ಮಾನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಜನರು ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಪ್ರಚೋದಿಸಲಾಗುತ್ತದೆ. 2022ನೇ ಇಸವಿಯ ಧ್ಯೇಯವಾಕ್ಯ ‘‘Protect The Environment ’’ ಅಂದರೆ ‘‘ಪರಿಸರವನ್ನು ರಕ್ಷಿಸಿ’’ ಎಂಬುದಾಗಿದೆ. ತಂಬಾಕು ಬೆಳೆ ಪರಿಸರವನ್ನು ಹಾಳುಗೆಡವುತ್ತದೆ ಮತ್ತು ತಂಬಾಕನ್ನು ಸೇವಿಸಿದ ವ್ಯಕ್ತಿಯ ಆರೋಗ್ಯವನ್ನೂ ಅದು ಹಾಳು ಮಾಡುತ್ತದೆ ಎಂಬ ವಿಚಾರವನ್ನು ಜನರಿಗೆ ಮನದಟ್ಟು ಮಾಡುವ ಉದ್ದೇಶ ಇದರ ಹಿಂದೆ ಅಡಗಿದೆ. ಒಂದು ಅಂದಾಜಿನ ಪ್ರಕಾರ ಜಾಗತಿಕವಾಗಿ, ತಂಬಾಕು ಸುಮಾರು 8 ಮಿಲಿಯನ್ ಮಂದಿಯನ್ನು ವರ್ಷ ಒಂದರಲ್ಲಿ ಆಪೋಷನ ತೆಗೆದುಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಬಳಕೆಗೆ ಕಡಿವಾಣ ಹಾಕದಿದ್ದಲ್ಲಿ ಈ ಸಂಖ್ಯೆ ದ್ವಿಗುಣವಾಗುತ್ತಲೇ ಹೋಗುತ್ತದೆ. ಇಂದಿನ ಜಾಗತೀಕರಣಗೊಂಡ ಆಧುನಿಕ ಜಗತ್ತಿನಲ್ಲಿ ಸಿಗರೇಟ್ ಸೇವನೆ ಅಥವಾ ತಂಬಾಕು ಉತ್ಪನ್ನಗಳ ಸೇವನೆ ಫ್ಯಾಶನ್ ಮತ್ತು ಪ್ರತಿಷ್ಠೆಯಾಗಿ ಮಾರ್ಪಾಡಾಗಿದೆ. ದೃಶ್ಯ ಮಾಧ್ಯಮ, ಜಾಹೀರಾತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ತಂಬಾಕು ಉತ್ಪನ್ನಗಳ ವೈಭವೀಕರಣದಿಂದಾಗಿ ಇಂದಿನ ಲಕ್ಷಾಂತರ ಯುವಕ-ಯುವತಿಯರು ಬಹು ಬೇಗ ದಾರಿ ತಪ್ಪಿ, ಧೂಮಪಾನದ ಚಟಕ್ಕೊಳಗಾಗಿ ಸಾವಿನ ಕೂಪಕ್ಕೆ ಬೀಳುತ್ತಿದ್ದಾರೆ. ಹೀಗೆ ದಾರಿ ತಪ್ಪುತ್ತಿರುವ ಯುವ ಜನತೆಯನ್ನು ಎಚ್ಚರಿಸಿ, ಅರಿವು ಮೂಡಿಸಿ, ತಂಬಾಕು ಉತ್ಪನ್ನಗಳಿಂದ ದೂರ ಉಳಿಯುವಂತೆ ಮಾಡಿ ತಂಬಾಕಿನ ಬಳಕೆಯಿಂದ ಉಂಟಾಗುವ ಸಾವು, ನೋವು ಪ್ರಾಣ ಹಾನಿ ಮತ್ತು ಮನುಷ್ಯ ಶಕ್ತಿಯ ಸೋರುವಿಕೆಯನ್ನು ತಪ್ಪಿಸಿ, ಸುಂದರ ಸದೃಢ ಆರೋಗ್ಯ ಪೂರ್ಣ ಸಮಾಜವನ್ನು ಕಟ್ಟುವ ಅರ್ಥ ಪೂರ್ಣ ಉದ್ದೇಶ ಈ ವಿಶ್ವ ತಂಬಾಕು ರಹಿತ ದಿನಾಚರಣೆಯ ಹಿಂದೆ ಇದೆ. ತಂಬಾಕು ಮತ್ತು ತಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟು, ಗುಟ್ಕಾ ಇತ್ಯಾದಿಗಳೆಲ್ಲವೂ ಕ್ಷಣಿಕ ಸುಖ ನೀಡುವ, ಜೀವಂತ ವ್ಯಕ್ತಿಯನ್ನು ಕ್ಷಣ ಕ್ಷಣಕ್ಕೂ ಕೊಲ್ಲುವ ಮತ್ತು ಯಾವುದೇ ಕ್ಷಣದಲ್ಲಿ ಸ್ಫೋಟಿಸುವ ಬಾಂಬ್ ಇದ್ದಂತೆ ಎಂದರೆ ಅತಿಶಯೋಕ್ತಿಯಾಗದು, ಜಗತ್ತಿನಲ್ಲಿ ಚಿಕಿತ್ಸೆ ಇಲ್ಲದ ಅತ್ಯಂತ ಮಾರಕ ರೋಗವಾದ ಕ್ಯಾನ್ಸರ್‌ಗೆ ಕಾರಣವಾಗುವ ಬಹಳ ಮೂಲಭೂತ ವಸ್ತು ಎಂದರೆ ತಂಬಾಕು ಉತ್ಪನ್ನಗಳು ಎನ್ನುವ ಕಟು ಸತ್ಯವನ್ನು ಜನರು ಮರೆಯಲೇಬಾರದು. ಈ ತಂಬಾಕು ಉತ್ಪನ್ನಗಳ ಬಳಕೆಯು ಹಲವಾರು ರೀತಿಯ ಕ್ಯಾನ್ಸರ್‌ಗಳಾದ ಬಾಯಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಗಂಟಲಿನ ಕ್ಯಾನ್ಸರ್, ಹೃದಯಾಘಾತ, ಮೆದುಳಿನ ಆಘಾತ ಅಥವಾ ಸ್ಟ್ರೋಕ್, ಶ್ವಾಸಕೋಶದ ರೋಗಗಳು, ಅಂಧತ್ವ ಮುಂತಾದ ಹಲವಾರು ತೊಂದರೆಗಳಿಗೆ ಸದ್ದಿಲ್ಲದೆ ಮುನ್ನುಡಿ ಬರೆಯುತ್ತದೆ.

ತಂಬಾಕು ಮತ್ತು ಶ್ವಾಸಕೋಶದ ತೊಂದರೆಗಳು

ಶ್ವಾಸಕೋಶದ ಕ್ಯಾನ್ಸರ್‌ಗೆ ಅತ್ಯಂತ ಪ್ರಮಖ ಮತ್ತು ಸಾಮಾನ್ಯ ಕಾರಣವೆಂದರೆ ಧೂಮಪಾನ. ಹಾಗೆಂದ ಮಾತ್ರಕ್ಕೆ ಧೂಮಪಾನ ಮಾಡದವರಿಗೆ ಶ್ವಾಸಕೋಶದ ಕ್ಯಾನ್ಸರ್ ಬರಬಾರದೆಂದಿಲ್ಲ. ಸಾವಿರದಲ್ಲಿ ಒಬ್ಬರಿಗೆ ಬರಲೂಬಹುದು. ಆದರೆ ನೂರರಲ್ಲಿ ತೊಂಬತ್ತು ಮಂದಿ ಶ್ವಾಸಕೋಶದ ಕ್ಯಾನ್ಸರ್ ಇರುವವರಿಗೆ ತಂಬಾಕಿನ ಚಟ ಇದ್ದೇ ಇರುತ್ತದೆ. ಇದಲ್ಲದೆ ತಂಬಾಕಿನ ಅತಿಯಾದ ಬಳಕೆಯಿಂದ ಶ್ವಾಸಕೋಶದ ಒಳಭಾಗದಲ್ಲಿ ಉರಿಯೂತ ಉಂಟಾಗಿ ಶ್ವಾಸಕೋಶದ ದ್ರವ್ಯಗಳು ಗಟ್ಟಿಯಾಗಿ ಬಹಳಷ್ಟು ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದನ್ನು ಆಂಗ್ಲ ಭಾಷೆಯಲ್ಲಿ COPD ಎಂದು ಕರೆಯುತ್ತಾರೆ. ಕನ್ನಡದಲ್ಲಿ ‘‘ದೀರ್ಘ ಕಾಲಿಕ ಉಸಿರಾಟ ತಡೆಗಟ್ಟುವ ಶ್ವಾಸಕೋಶದ ಕಾಯಿಲೆ’’ ಎಂದು ಕರೆಯುತ್ತಾರೆ. ತಂಬಾಕು ಸೇವಿಸುವ ಹೆಚ್ಚಿನ ಮಂದಿಗೆ ಈ ರೋಗ ಬಂದೇ ಬರುತ್ತದೆ. ಇನ್ನು ಮಕ್ಕಳಲ್ಲಿ ಶ್ವಾಸಕೋಶ ಬಹಳ ಚಂಚಲವಾಗಿರುತ್ತದೆ. ಬೇರೆಯವರು ಧೂಮಪಾನ ಮಾಡಿದ ಹೊಗೆಯಿಂದಲೇ ಮಕ್ಕಳ ಶ್ವಾಸಕೋಶ ಹಾನಿಯಾಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಮಕ್ಕಳಿಗೆ ಪದೇ ಪದೇ ಶ್ವಾಸಕೋಶದ ಸೋಂಕು ಮತ್ತು ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ತಂದೆ-ತಾಯಂದಿರು, ಪೋಷಕರು ಸದಾಕಾಲ ಧೂಮಪಾನ ಮಾಡುವುದರಿಂದ ಸಣ್ಣ ಮಕ್ಕಳಿಗೂ ಶ್ವಾಸಕೋಶದ ತೊಂದರೆ ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮೊದಲೇ ಕ್ಷಯ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ತಂಬಾಕು ಸೇವನೆ ಅಥವಾ ಧೂಮಪಾನ ಮಾಡುವುದರಿಂದ ಶ್ವಾಸಕೋಶಕ್ಕೆ ಮತ್ತಷ್ಟು ಹಾನಿಯಾಗಿ ಶ್ವಾಸಕೋಶದ ವೈಫಲ್ಯಕ್ಕೆ ಕಾರಣವಾಗುತ್ತದೆ.

ವಿಶ್ವದಾದ್ಯಂತ ಸುಮಾರು 8 ದಿನಗಳನ್ನು ವಿಶ್ವಸಂಸ್ಥೆ ಅತ್ಯಂತ ಮುತುವರ್ಜಿ ವಹಿಸಿ ಆಚರಿಸುತ್ತದೆ. ಈ ದಿನಗಳು ಯಾವುದೆಂದರೆ ವಿಶ್ವ ಆರೋಗ್ಯ ದಿನ(ಎಪ್ರಿಲ್ 07), ವಿಶ್ಯ ರಕ್ತದಾನಿಗಳ ದಿನ(ಜೂನ್ 14), ವಿಶ್ವ ಲಸಿಕಾ ದಿನ ಅಥವಾ ವಾರ (ಎಪ್ರಿಲ್ ಕೊನೆ ವಾರ), ವಿಶ್ವ ಕ್ಷಯ ರೋಗ ದಿನ (ಮಾರ್ಚ್ 24), ವಿಶ್ವ ಮಲೇರಿಯ ದಿನ (ಎಪ್ರಿಲ್ 25), ವಿಶ್ವ ಹೆಪಟೈಟೀಸ್ ದಿನ (ಜುಲೈ 28), ವಿಶ್ವ ಏಡ್ಸ್ ದಿನ (ಡಿಸೆಂಬರ್ 02) ಮತ್ತು ವಿಶ್ವ ತಂಬಾಕು ರಹಿತ ದಿನ (ಮೇ 31).

ಕೊನೆ ಮಾತು

ತಂಬಾಕು ಎನ್ನುವುದು ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಮೂಲಭೂತ ವಸ್ತು ಎಂಬುದು ಸಾರ್ವಕಾಲಿಕ ಸತ್ಯ. ಒಬ್ಬ ಸಾಮಾನ್ಯ ಧೂಮಪಾನಿ ಉಳಿದವರಿಂದ 10 ವರ್ಷಗಳ ಮೊದಲೇ ಸಾಯುತ್ತಾನೆಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಖಂಡಿತವಾಗಿಯೂ ಹತ್ತಾರು ಕಾಯಿಲೆಗಳು ಬಂದೇ ಬರುತ್ತವೆ ಎಂಬ ಸತ್ಯದ ಅರಿವು ಇದ್ದೂ, ಜನರು ಅದಕ್ಕೆ ದಾಸರಾಗಿ ಹತ್ತಾರು ರೋಗಗಳನ್ನು ದಿನನಿತ್ಯ ಆಹ್ವಾನಿಸಿಕೊಳ್ಳುತ್ತಿರುವುದು ವೈದ್ಯ ಲೋಕಕ್ಕೆ ಜೀರ್ಣಿಸಿಕೊಳ್ಳಲಾಗದ ಕಟು ಸತ್ಯ ಎಂದರೆ ತಪ್ಪಾಗಲಾರದು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಷೇದ, ತಂಬಾಕು ಜಾಹೀರಾತು ನಿರ್ಬಂಧ, ಶಾಲೆಗಳ ಸುತ್ತ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಇವೆಲ್ಲವನ್ನು ಸರಕಾರ ಮಾಡಿದರೂ, ಜನರು ತಮ್ಮ ಇಚ್ಛಾಶಕ್ತಿಯನ್ನು ಬಳಸಿಕೊಂಡು, ತಮ್ಮ ಜವಾಬ್ದಾರಿ ಅರಿತು ತಂಬಾಕು ಉತ್ಪನ್ನಗಳಿಂದ ದೂರ ಇರಬೇಕು. ಕಾನೂನಿನ ಶಿಕ್ಷೆಗೆ ಹೆದರಿ ಯಾರೂ ತಂಬಾಕು ಬಳಸದೆ ಇರಲಾರರು. ಈ ವಿಚಾರದಲ್ಲಿ ಜನರ ಪಾಲುಗೊಳ್ಳುವಿಕೆ ಅತೀ ಅಗತ್ಯ. ಎಲ್ಲವನ್ನು ಕಾನೂನಿನ ಮೂಲಕ ನಿಯಂತ್ರಿಸಲು ಸಾಧ್ಯವಿಲ್ಲ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಾವೇ ನಿರ್ಬಂಧ ಹಾಕಿಕೊಳ್ಳಬೇಕು, ತಮಗೆ ಕ್ಯಾನ್ಸರ್ ಬರದಂತೆ ಸರಕಾರ ನೋಡಿಕೊಳ್ಳಬೇಕೆಂಬುದು ಮೂರ್ಖತನದ ಪರಮಾವಧಿ. ಜನರ ಪಾಲ್ಗೊಳ್ಳುವಿಕೆ ಇಲ್ಲದಿದ್ದಲ್ಲಿ ಯಾವ ಕಾನೂನು ಇದ್ದರೆ ಏನು ಪ್ರಯೋಜನ? ಈ ಎಲ್ಲಾ ವಿಚಾರವನ್ನು ಅರ್ಥೈಸಿಕೊಂಡು, ನಾವೆಲ್ಲ ಸೇರಿ ತುಂಬು ಹುಮ್ಮಸ್ಸಿನಿಂದ ತಂಬಾಕಿನ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸೋಣ. ಈ ದಿನವೇ ತಂಬಾಕಿನ ಉತ್ಪನ್ನಗಳಿಗೆ ಗುಡ್‌ಬೈ ಹೇಳಿ, ಮುಂದೆಂದೂ ತಂಬಾಕಿನ ಉತ್ಪನ್ನ ಬಳಸುವುದಿಲ್ಲ ಎಂಬ ಪ್ರತಿಜ್ಞೆ ಮಾಡೋಣ. ಹಾಗಾದಲ್ಲಿ ಮಾತ್ರ ಈ ವಿಶ್ವ ತಂಬಾಕು ರಹಿತ ದಿನ ಆಚರಣೆಗೆ ಹೆಚ್ಚು ಮೌಲ್ಯ ಬಂದಿತು.

share
ಡಾ. ಮುರಲೀ ಮೋಹನ್,  ಚೂಂತಾರು
ಡಾ. ಮುರಲೀ ಮೋಹನ್, ಚೂಂತಾರು
Next Story
X