ಜಮ್ಮು-ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಶಾಲಾ ಶಿಕ್ಷಕಿ ಬಲಿ

Photo:PTI
ಶ್ರೀನಗರ,ಮೇ 31: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಹಿಂದು ಶಾಲಾ ಶಿಕ್ಷಕಿಯೋರ್ವರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿದ್ದಾರೆ.ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ನಿವಾಸಿ ರಜನಿ ಬಾಲಾ (36) ಕುಲ್ಗಾಮ್ನ ಗೋಪಾಲಪುರ ಪ್ರದೇಶದಲ್ಲಿಯ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶಾಲೆಯ ಹೊರಗೆ ಬಾಲಾರ ಮೇಲೆ ಉಗ್ರರು ಹಲವಾರು ಗುಂಡುಗಳನ್ನು ಹಾರಿಸಿದ್ದು,ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದರು.ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿವೆ.ಬಾಲಾ ಹತ್ಯೆಯನ್ನು ಖಂಡಿಸಿರುವ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು,ಇದೊಂದು ಹೇಯ ಕೃತ್ಯ ಎಂದು ಕಿಡಿಕಾರಿದ್ದಾರೆ. ಬಾಲಾ ಕುಟುಂಬಕ್ಕೆ ಅವರು ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.
ಟಿವಿ ನಟಿ ಅಂಬ್ರೀನ್ ಭಟ್ ಹತ್ಯೆಯ ಬೆನ್ನಲ್ಲೇ ಬಾಲಾ ಅವರನ್ನು ಉಗ್ರರು ಕೊಂದಿದ್ದಾರೆ. ಮೇ 25ರಂದು ಬಡ್ಗಾಮ್ ಜಿಲ್ಲೆಯ ಚದೂರಾ ಪಟ್ಟಣದಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಭಟ್ ಕೊಲ್ಲಲ್ಪಟ್ಟಿದ್ದರು ಮತ್ತು ಅವರ ಸೋದರಳಿಯ ಫರ್ಹಾನ್ ಝುಬೇರ್ ಗಾಯಗೊಂಡಿದ್ದ. ಉಗ್ರರು ಭಯೋತ್ಪಾದಕ ಸಂಘಟನೆ ಲಷ್ಕರೆ ತೈಬಾ ಜೊತೆ ನಂಟು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದರು.





