ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ

ಶಿವಮೊಗ್ಗ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸಲಾಗಿದೆ .
ನಗರದ ರೈತ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಈವರೆಗೂ ಸಂಘದ ಗೌರವಾಧ್ಯಕ್ಷರಾಗಿದ್ದ ಹೆಚ್.ಆರ್.ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಸಭೆ ಬಳಿಕ ನೂತನ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಗಂಭೀರವಾದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿರುವ ಕೋಡಿಹಳ್ಳಿ ಚಂದ್ರಶೇಖರ್ ಆರೋಪವನ್ನು ಅಲ್ಲಗಳೆದಿಲ್ಲ. ಈವರೆಗೂ ಸಣ್ಣಪುಟ್ಟ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಈಗ ಗಂಭೀರ ಆರೋಪವಿದೆ. ಹಾಗಿದ್ದಾಗ ನೈತಿಕ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ಅವರೇ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗಾಗಿ ತುರ್ತು ಸಭೆ ಸೇರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು.
ಡಾ.ಬಿ.ಎಂ.ಚಿಕ್ಕಸ್ವಾಮಿ, ಶಶಿಕಾಂತ್ ಪಡಸಲಗಿ, ಮೊಹಮದ್ ನಜೀರ್‌ಸಾಬ್ ಮೂಲಿಮನಿ, ಹೊನ್ನೂರು ಮುನಿಯಪ್ಪ, ಬಸವನಗೌಡ ಪಾಟೀಲ್ ಬಿರಾದಾರ್, ಸುಬಾಷ್ ಐಕೂರು ಮುಂತಾದವರು ಪಾಲ್ಗೊಂಡಿದ್ದರು.





