ಭಾರತವನ್ನು ಮತಾಂಧ ರಾಷ್ಟ್ರವಾಗಿಸಲು ಬಿಡಬಾರದು: ಕೇರಳ ಮಾಜಿ ಶಿಕ್ಷಣ ಸಚಿವ ಡಾ. ಕೆ.ಟಿ. ಜಲೀಲ್
ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಮುಸ್ಲಿಂ ಸಮಾವೇಶ

ಮಂಗಳೂರು: ಬಹುತ್ವ, ಧರ್ಮ ನಿರಪೇಕ್ಷತೆಯೇ ಜೀವಾಳವಾಗಿರುವ ಭಾರತವನ್ನು ಪಾಕಿಸ್ತಾನದಂತಹ ಮತಾಂಧ ರಾಷ್ಟ್ರವನ್ನಾಗಿಸಲು ಆರೆರೆಸ್ಸ್, ಬಿಜೆಪಿ ಷಡ್ಯಂತ್ರ ನಡೆಸುತ್ತಿದ್ದು, ಅದನ್ನು ವಿಫಲಗೊಳಿಸಬೇಕಾಗಿದೆ ಎಂದು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವ, ಹಾಲಿ ಶಾಸಕ ಡಾ. ಕೆ.ಟಿ. ಜಲೀಲ್ ಹೇಳಿದ್ದಾರೆ.
ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿಯು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಎರಡು ದಿನಗಳ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶ ಜಾತ್ಯಾತೀತ ರಾಷ್ಟ್ರ. ಬಹುತ್ವದ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ಯಾವುದೇ ಒಂದು ಸಮುದಾಯವನ್ನು ದೂರವಿಟ್ಟು, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಮ್ಮ ದೇಶವು ಯಾವುದೇ ಧರ್ಮವನ್ನು ಯಾವುದೇ ಕಾಲದಲ್ಲಿ ನಿರಾಕರಿಸಿಲ್ಲ. ಹಿಂದೂ ಧರ್ಮದ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮ ಸ್ವೀಕರಿಸಿದಾಗ ಅವರನ್ನು ಯಾರೂ ಪ್ರಶ್ನಿಸಿಲ್ಲ. ಮುಸ್ಲಿಂ ರಾಜರು 900 ವರ್ಷಗಳ ಕಾಲ ಆಡಳಿತ ನಡೆಸಿದರು. ಒಂದು ವೇಳೆ ಅವರು ಧರ್ಮವನ್ನು ಆಡಳಿತದಲ್ಲಿ ಜೊತೆಯಾಗಿಸಿದ್ದರೆ ಇಷ್ಟೊಂದು ದೀರ್ಘ ಕಾಲ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಮೊಘಲರ ಆಡಳಿತ ಕೊನೆಗೊಂಡಿದ್ದು ಅವರ ಧರ್ಮದ ಕಾರಣಕ್ಕೆ ಅಲ್ಲ. ಬದಲಾಗಿ ಬ್ರಿಟೀಷರ ಕಾರಣದಿಂದಾಗಿದೆ. ಮೊಘಲರ ಸಹಿಷ್ಣುತೆಯ ಕಾರಣದಿಂದಾಗಿ ಭಾರತ ದಲ್ಲಿ ಆಡಳಿತ ನಡೆಸಿದ್ದಾರೆ. ದೇಶವನ್ನು 16 ವರ್ಷ ಆಡಳಿತ ಮಾಡಿದ್ದು ಯಾವುದೇ ಧರ್ಮ ಆಚರಿಸದ ಜವಾಹರ್ ಲಾಲ್ ನೆಹರೂ ಆಗಿದ್ದಾರೆ. ಯಾವುದೇ ಧರ್ಮ ಆಚರಿಸದ ನೆಹರೂ ಅವರನ್ನು ಯಾರೂ ಪ್ರಶ್ನಿಸಿಲ್ಲ. ಬಾಕ್ರಾ-ನಂಗಲ್ ಉದ್ಘಾಟನೆ ಮಾಡಿದ ನೆಹರೂ ಈ ಅಣೆಕಟ್ಟನ್ನು ತೋರಿಸಿ ಇದು 'ಭಾರತದ ದೇವಾಲಯ' ಎಂದು ಹೇಳಿದ್ದರು. ಆದರೆ ವರ್ತಮಾನ ಕಾಲದಲ್ಲಿ ಕಾಂಗ್ರೆಸ್‌ನ ಮೃದು ಹಿಂದುತ್ವ ಕಾಣುವಾಗ ಬೇಸರವಾಗುತ್ತದೆ. ವಾಜಪೇಯಿ ಆಡಳಿತ ಮಾಡಬೇಕಾದರೆ ಭಾರತ ಇಷ್ಟು ಮಟ್ಟದಲ್ಲಿ ಕೋಮುದ್ರುವೀಕರಣ ಗೊಂಡಿರಲಿಲ್ಲ. ಸಹಿಷ್ಣುತೆ, ಜಾತ್ಯಾತೀತತೆಗೆ ವಾಜಪೇಯಿ ಬದ್ಧರಾಗಿದ್ದರು. ಅದರೆ ನರೇಂದ್ರ ಮೋದಿ ಸರ್ಕಾರವು ಕಳೆದ 8 ವರ್ಷಗಳಲ್ಲಿ ನಿರಂತರವಾಗಿ ಸಮುದಾಯಗಳ ನಡುವೆ ವಿಭಜನೆಯ ಮೂಲಕ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ವಿಶ್ವದಾದ್ಯಂತ ಭಾರತ ಗುರುತಿಸಿದ್ದು ಬಹುತ್ವದಿಂದಾಗಿದೆ. ಆದರೆ ಈ ಬಹುತ್ವದ ಬಗ್ಗೆ ಏನೂ ತಿಳಿದಿಲ್ಲದ ಜನರು ಭಾರತವನ್ನು ಆಡಳಿತ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ತಮ್ಮ ದೇಶದಿಂದ ದೂರ ಮಾಡಿದ ಎಲ್ಲಾ ದೇಶಗಳು ಕೂಡಾ ನಾಶವಾಗಿದೆ. ಇದಕ್ಕೆ ಜರ್ಮನ್ ಒಂದು ಉದಾಹರಣೆ. ಜರ್ಮನ್‌ನಲ್ಲಿ ಯಹೂದಿಗಳನ್ನು ಓಡಿಸದಿದ್ದರೆ ಜರ್ಮನ್ ವಿಶ್ವದ ಶಕ್ತಿಶಾಲಿ ದೇಶವಾಗಿರುತ್ತಿತ್ತು. ಪ್ರಾನ್ಸ್, ಸ್ಪೇನ್‌ನಲ್ಲಿ ಕೂಡಾ ನಡೆದಿದ್ದು ಇದುವೇ ಆಗಿದೆ. ಈ ದೇಶ ತೊರೆದು ಹೋದ ಜನರು ತಾವು ನೆಲೆ ನಿಂತ ದೇಶವನ್ನು ಅಭಿವೃದ್ಧಿ ಮಾಡಿದರು. ಹಾಗೆಯೇ ಭಾರತದಲ್ಲಿ ಯಾವುದೇ ಜನಾಂಗ, ಧರ್ಮವನ್ನು ನಿರಾಕರಿಸಿ ದೇಶ ಮುನ್ನಡೆಸಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿವೆ. ಜಾತ್ಯಾತೀತತೆ ಇಲ್ಲವಾದರೆ ಭಾರತ ಇಲ್ಲವಾಗುತ್ತದೆ ಎಂದರು.
ನರೇಂದ್ರ ಮೋದಿ ಸರ್ಕಾರದ ಧಮನಕಾರಿ ಕ್ರಮ ಅಪಾಯಕಾರಿ. ಅದನ್ನು ನಾವು ಪರಾಭವಗೊಳಿಸಬೇಕು. ಎಲ್ಲಾ ಧರ್ಮಗಳು ಬೇರೆ ಬೇರೆಯಾದರೂ ಒಂದೇ ಜಾತ್ಯಾತೀತ ನಂಬಿಕೆ ಹೊಂದಿದೆ. ಬೈಬಲ್, ಕುರಾನ್, ಭಗವದ್ಗೀತೆ ಒಂದೇ ಭಾವೈಕತೆಯನ್ನು ಸಾರುತ್ತದೆ. ನೂರಾರು ವರ್ಷ ಕಾಲ ಆಳಿದ ಬ್ರಿಟಿಷರನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದಾದರೆ ಕೇವಲ ಎಂಟು ವರ್ಷ ಆಳಿದ ಮೋದಿ ಸರ್ಕಾರವನ್ನು ಕೂಡಾ ಸೋಲಿಸಲು ನಮಗೆ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.
ಈ ದೇಶದಲ್ಲಿ ಏನು ತಿನ್ನಬೇಕು, ಏನನ್ನು ಧರಿಸಬೇಕು ಎನ್ನುವುದು ಅವರ ಸ್ವಂತ ಆಯ್ಕೆ. ಅದರ ನಡುವೆ ಪ್ರಭುತ್ವ ಯಾಕೆ ಬರಬೇಕು? ಮಹಿಳೆಯರು ತಮಗೆ ಬೇಕಾದ ಬಟ್ಟೆ ಧರಿಸುವುದು ಅವರ ಆಯ್ಕೆಯಾಗಿದೆ. ಹಿಜಾಬ್ ಇತ್ಯಾದಿ ಆಯ್ಕೆ ಮಹಿಳೆಯದ್ದು. ಅದರ ನಡುವೆ ಆಡಳಿತ ಬರಬಾರದು ಎಂದು ಹೇಳಿದ ಜಲೀಲ್, ಈ ಹಿಂದೆ ಉತ್ಸವ, ಉರೂಸುಗಳ ನೆಪದಲ್ಲಿ ದೇಶದ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಎಲ್ಲರೂ ಜೊತೆಯಾಗಿ ಸೇರಲೆಂದೇ ಪೂರ್ವಜರು ಈ ಉತ್ಸವ, ಉರೂಸುಗಳನ್ನು ಆರಂಭ ಮಾಡಿರುವುದು. ವಿಶ್ವದ ಬೇರೆ ಎಲ್ಲೂ ಕೂಡಾ ಇಂತಹ ಆಚರಣೆಗಳು ಇಲ್ಲ. ಈಗ ಬೇರೆ ಧರ್ಮದ ವ್ಯಕ್ತಿ ವ್ಯಾಪಾರಕ್ಕೆ ಬರಬಾರದು ಎಂಬ ರಾಜಕೀಯ ನಡೆಸಲಾಗುತ್ತಿದೆ ಎಂದವರು ಆಕ್ಷೇಪಿಸಿದರು.
ಹಿಂದೂ ಕೋಮುವಾದಕ್ಕೆ, ಮುಸ್ಲಿಂ ಕೋಮುವಾದ ಉತ್ತರವಲ್ಲ. ಯಾವುದೇ ಕೋವುವಾದದ ವಿರುದ್ಧ ಸಿಪಿಐಎಂ ಹೋರಾಡುತ್ತದೆ. ಎಲ್ಲಾ ಜಾತಿ ಮತಗಳನ್ನು ಸಿಪಿಐಎಂ ಗೌರವಿಸುತ್ತದೆ. ಜಾಹಗೀರ್ ಪುರಿಯಲ್ಲಿ ಬೃಂದಾ ಕಾರಟ್ ಅದನ್ನೇ ಮಾಡಿದ್ದಾರೆ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ, "ಸಿಪಿಐಎಂ ಪಕ್ಷ ಈ ಸಮಾವೇಶವನ್ನು ಆಯೋಜನೆ ಮಾಡಿರುವುದು ಎಲ್ಲರಿಗೂ ಕುತೂಹಲ ಉಂಟು ಮಾಡಿರಬಹುದು. ಭಾರತ ದೇಶದ ರಾಜಕಾರಣ ಮುಸ್ಲಿಮರ ಸುತ್ತ ಸುತ್ತುತ್ತಿರುವ ಈ ಸಂದರ್ಭದಲ್ಲಿ ಮುಸ್ಲಿಂ ಸಮದಾಯದ ಸಂಕಟವನ್ನು ರಾಜ್ಯಕ್ಕೆ ತಿಳಿಸುವ ಅಗತ್ಯವಿದೆ. ಇದು ಮುಸ್ಲಿಮರ ಸಮಾವೇಶವಲ್ಲ, ಇದು ಮುಸ್ಲಿಂ ಸಮಾವೇಶ ಎಂದು ಹೇಳಿದರು.
ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯಾಧ್ಯಕ್ಷ ಮಾವಳ್ಳಿ ಶಂಕರ್, , ಹಿರಿಯ ಸಾಹಿತಿ ಡಾ.ಕೆ ಷರೀಫಾ, ಸಿಪಿಐಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು ಬಸವರಾಜು, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ್ ಶೆಟ್ಟಿ, ಸಾಹಿತಿ ಕೆ ನೀಲಾ, ರಾಜ್ಯ ಮುಖಂಡರು ಕೆ ಎಸ್ ವರಲಕ್ಷ್ಮೀ, ಅಕ್ರಂ ಪಾಶ ಬಾಗೇಪಳ್ಳಿ, ಶೇಖ್ ಷಾ ಖಾದ್ರಿ, ಖಾಸಿಂ ಸರ್ದಾರ್ ರಾಮದುರ್ಗ, ಖಾಸಿಂ ಕೊಪ್ಪಳ, ಉಪಸ್ಥಿತರಿದ್ದರು.
ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಸಯ್ಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು.
ಬಿ.ಕೆ. ಇಮ್ತಿಯಾಝ್ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ ನೇತ್ರಾವತಿಯಲ್ಲಿ ನೆತ್ತರು ಮತ್ತು ಪತ್ರಕರ್ತ ಬಿ.ಎಂ ಹನೀಫ್ ಬರೆದ ಸೆಕ್ಯುಲರ್ ಸೇನಾನಿ ಸುಭಾಷ್ ಚಂದ್ರ ಬೋಸ್ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.










