ಬುಡಕಟ್ಟು ವ್ಯಕ್ತಿಯ ಹತ್ಯೆ: ಒಂದು ವರ್ಷದ ಬಳಿಕ ಭದ್ರತಾ ಪಡೆಯ ವಿರುದ್ಧ ಎಫ್ಐಆರ್ ದಾಖಲು

Photo: ಸಾಂದರ್ಭಿಕ ಚಿತ್ರ/PTI
ರಾಂಚಿ: ಒಂದು ವರ್ಷದ ಹಿಂದೆ ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ CRPF ಉಪ ಕಮಾಂಡೆಂಟ್ ಸೇರಿದಂತೆ ಎಂಟು ಭದ್ರತಾ ಸಿಬ್ಬಂದಿ ವಿರುದ್ಧ ಜಾರ್ಖಂಡ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಕಳೆದ ವರ್ಷ ಜೂನ್ 13 ರಂದು, ಜಾರ್ಖಂಡ್ನ ಲತೇಹರ್ ಜಿಲ್ಲೆಯ ಗಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರ್ಹುಲ್ ಹಬ್ಬವನ್ನು ಆಚರಿಸಲು ಸಮೀಪದ ಗ್ರಾಮಸ್ಥರು ಗನೈಖಾಡ್ ಅರಣ್ಯಕ್ಕೆ ಆಗಮಿಸಿದ್ದರು. ಅದೇ ಸಮಯದಲ್ಲಿ, ಭದ್ರತಾ ಪಡೆ ಸಿಬ್ಬಂದಿ ಕೂಡ ಶೋಧ ಕಾರ್ಯಾಚರಣೆಯ ಅಡಿಯಲ್ಲಿ ಅಲ್ಲಿಗೆ ತಲುಪಿದ್ದರು. ಅರಣ್ಯದಲ್ಲಿ ಮಾವೋವಾದಿಗಳು ಇದ್ದಾರೆ ಎಂದು ಭದ್ರತಾ ಪಡೆ ಸಿಬ್ಬಂದಿ ಭಾವಿಸಿದ ಭದ್ರತಾ ಪಡೆ ಸಿಬ್ಬಂದಿ ಗುಂಡು ಹಾರಿಸಿದ್ದು, ಗುಂಡಿನ ದಾಳಿಯಿಂದ ಬ್ರಹ್ಮದೇವ್ ಸಿಂಗ್ ಎನ್ನುವವರು ಸಾವನ್ನಪ್ಪಿದ್ದರು. ಈ ಗುಂಡಿನ ದಾಳಿಯಲ್ಲಿ ಗ್ರಾಮಸ್ಥ ದೀನಾನಾಥ್ ಎಂಬವರು ಕೂಡ ಗಾಯಗೊಂಡಿದ್ದಾರೆ.
ಭದ್ರತಾ ಪಡೆಗಳ ಗುಂಡಿನ ದಾಳಿಯ ಸಂದರ್ಭದಲ್ಲಿ ಬ್ರಹ್ಮದೇವ್ ಸಿಂಗ್ ಮತ್ತು ಇತರ ಗ್ರಾಮಸ್ಥರು ತಮ್ಮ ಕೈಗಳನ್ನು ಮೇಲಕ್ಕೆತ್ತಿ ಅವರು ಮಾವೋವಾದಿಗಳಲ್ಲ ಎಂದು ಸೂಚನೆ ನೀಡಿದ್ದರು. ಗುಂಡು ಹಾರಿಸದಂತೆ ಭದ್ರತಾ ಪಡೆಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಅವರು ಕಿವಿಗೊಟ್ಟಿರಲಿಲ್ಲ. ಇದರ ಪರಿಣಾಮ ದೀನಾನಾಥ್ ಸಿಂಗ್ ಕೈಗೆ ಗುಂಡು ತಗುಲಿದ್ದು, ಬ್ರಹ್ಮದೇವ್ ಸಿಂಗ್ ಬುಲೆಟ್ ಗಾಯಗಳಿಂದ ಸಾವನ್ನಪ್ಪಿದರು. ಘಟನೆಯ ಸಮಯದಲ್ಲಿ ಗಾರು ಪ್ರದೇಶದ ಜನರು ಸಾಂಪ್ರದಾಯಿಕ ಭರ್ತುವಾ ಬಂದೂಕನ್ನು ಹೊಂದಿದ್ದರು, ಅವರು ಸಣ್ಣ ಪ್ರಾಣಿಗಳನ್ನು ಬೇಟೆಯಾಡಲು ಈ ಬಂದೂಕನ್ನು ಬಳಸುತ್ತಾರೆ. ಇದೇ ಬಂದೂಕನ್ನು ಕಾರಣವಾಗಿಟ್ಟುಕೊಂಡು, ಭದ್ರತಾ ಸಿಬ್ಬಂದಿಗಳು ಬುಡಕಟ್ಟು ಗ್ರಾಮಸ್ಥರ ಮೇಲೆ ಆರೋಪ ಹೊರಿಸಿದ್ದು, ತಮ್ಮ ಜೀವರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದೇವೆ ಎಂದು ಭದ್ರತಾ ಪಡೆ ಆರೋಪಿಸಿದೆ.
ಈ ಕೊಲೆಯ ವಿರುದ್ದ ಕಳೆದ ಒಂದು ವರ್ಷದ ನಿರಂತರ ಧರಣಿ ಪ್ರತಿಭಟನೆ ಮತ್ತು ಸಾಮಾಜಿಕ ಸಂಘಟನೆಗಳ ಅವಿರತ ಪ್ರಯತ್ನದ ನಂತರ, ನ್ಯಾಯಾಲಯದ ಆದೇಶದ ಮೇರೆಗೆ, ಕೊನೆಹೂ ಗಾರು ಪೊಲೀಸ್ ಠಾಣೆಯಲ್ಲಿ ಭದ್ರತಾ ಪಡೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.