ಪಠ್ಯದಿಂದ ನನ್ನ ‘ಸುಳ್ಳು ಹೇಳಬಾರದು’ ಕತೆಯನ್ನು ಕಿತ್ತು ಹಾಕಿ: ಸಚಿವರಿಗೆ ಸಾಹಿತಿ ಬೊಳುವಾರು ಮಹಮದ್ ಕುಂಞಿ ಪತ್ರ

ಬೆಂಗಳೂರು: ಬಿಜೆಪಿ ಸರ್ಕಾರದ ಪಠ್ಯ ಪರಿಷ್ಕರಣೆ ವಿರೋಧಿಸಿ 5ನೆಯ ತರಗತಿ ಪುಸ್ತಕದ 24ನೆಯ ಪುಟದಲ್ಲಿರುವ, ‘ಸುಳ್ಳು ಹೇಳಬಾರದು’ ಎಂಬ ಕತೆಯನ್ನು ಕೈಬಿಡುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ಗೆ ಬೊಳುವಾರು ಮಹಮದ್ ಕುಂಞಿ ಪತ್ರ ಬರೆದಿದ್ದಾರೆ.
ಈ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲೂ ಬೊಳುವಾರು ಮಹಮದ್ ಕುಂಞಿ ಪೋಸ್ಟ್ ಮಾಡಿದ್ದಾರೆ.
''ಪ್ರಸಕ್ತ ಸಿರಿ ಕನ್ನಡ–ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ (ಪರಿಷ್ಕೃತ) 5ನೆಯ ತರಗತಿ ಪುಸ್ತಕದ 24ನೆಯ ಪುಟದಲ್ಲಿರುವ, ‘ಸುಳ್ಳು ಹೇಳಬಾರದು’ ಎಂಬ ಹೆಸರಿನ ನನ್ನ ಪುಟ್ಟ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆಗಳಿರುವುದರಿಂದ, ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳುಂಟು'' ಎಂದು ಆತಂಕ ವ್ಯಕ್ತಪಡಸಿದ್ದಾರೆ.
''ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ'' ಎಂದು ಪತ್ರದಲ್ಲಿ ತಿಳಿಸಿದ್ದಾರೆ.







