ಆಟಿಸಂ ಸಮಸ್ಯೆ ಮಕ್ಕಳಿಗೆ ಅಕ್ಕರೆ, ಕಾಳಜಿ ತೋರಿಸಿ:ಬಿಷಪ್ ಜೆ.ಲೋಬೊ
ಉಡುಪಿ : ಆಟಿಸಂ ರೋಗ ಚಿಕ್ಕ ಮಕ್ಕಳಲ್ಲಿ ಕಂಡುಬರುವಂತಹ ಅಸ್ವಸ್ಥತೆಯಾಗಿದ್ದು, ತಮ್ಮ ಮಕ್ಕಳಿಗೆ ಅಂತಹ ಸಮಸ್ಯೆ ಇದೆ ಎಂದು ತಿಳಿದಾಗ ಪೋಷಕರು ವಿಶೇಷ ಪ್ರೀತಿ, ವಾತ್ಸಲ್ಯ ಮತ್ತು ಕಾಳಜಿ ವಹಿಸಿ ಅಕ್ಕರೆಯಿಂದ ಪಾಲನೆ ಮಾಡಿದಾಗ ಅಂತಹ ಮಕ್ಕಳು ಸಮಾಜದ ಆಸ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರಾದ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಮಂಗಳವಾರ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಯ ರಜತ ಮಹೋತ್ಸವದ ಪ್ರಯುಕ್ತ ನಿರ್ಮಿಸಲಾದ ಕಟ್ಟಡ ಹಾಗೂ ಆಟಿಸಂ ತರಬೇತಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ಭಾರತವೊಂದರಲ್ಲೇ ಸುಮಾರು ೫ ಮಿಲಿಯನ್ ಮಂದಿ ವಾರ್ಷಿಕವಾಗಿ ಈ ಆಟಿಸಂ ರೋಗದಿಂದ ಬಳಲುತ್ತಿದ್ದು, ಆಟಿಸಂ ಸಮಸ್ಯೆ ಇರುವ ಮಕ್ಕಳನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಪರಿಪೂರ್ಣ ಚಿಕಿತ್ಸೆ ನೀಡಬೇಕು. ಈ ರೋಗ ವನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೆ ಹೋದರೂ ಸಾಕಷ್ಟು ಪ್ರೋತ್ಸಾಹ ಮತ್ತು ಸಹಕಾರ ನೀಡಿದ್ದಲ್ಲಿ ಅಂತಹ ಮಕ್ಕಳ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಂಡು ಸಮಾಜಕ್ಕೆ ಈ ರೀತಿಯ ಮಕ್ಕಳು ಹೊರೆಯಾಗದೇ ಬದಲು ಆಸ್ತಿಯಾಗುವಂತೆ ನೋಡಿಕೊಳ್ಳಲು ಸಾಧ್ಯವಿದೆ ಎಂದರು.
ತಮ್ಮ ಮಕ್ಕಳಿಗೆ ಆಟಿಸಂ ಇದೆ ಎಂದು ತಿಳಿದಾಗ ಹೆತ್ತವರು ವಿಶೇಷ ಪ್ರೀತಿ ಮತ್ತು ಕಾಳಜಿ ವಹಿಸಬೇಕು. ಅಂತಹ ಮಕ್ಕಳನ್ನು ಯಾವುದೇ ಕಾರಣಕ್ಕೂ ದೂಷಿಸಬಾರದು ಮತ್ತು ಇತರ ಮಕ್ಕಳ ಜೊತೆ ಹೋಲಿಸಬಾರದು. ನಿರಂತರವಾಗಿ ಅಂತಹ ಮಕ್ಕಳಿಗೆ ಪ್ರೀತಿ ವಿಶ್ವಾಸ ತೋರಿಸಿ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡಿ ಅವರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ ವಿಶೇಷ ಮಕ್ಕಳು ಸಮಾಜಕ್ಕೆ ಹೊರೆಯಾಗದಂತೆ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದಾಗ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದ್ದು ಅಂತಹ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಬೆರೆಯುವ ಅವಕಾಶ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಂ.ಝೇವಿಯರ್ ಗೋಮ್ಸ್, ವಿಶೇಷ ಮಕ್ಕಳ ಜಿಲ್ಲಾ ಮಟ್ಟದ ತರಬೇತಿ ಅಧಿಕಾರಿ ರತ್ನಾ, ಕಥೊಲಿಕ್ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷೆ ಮೇರಿ ಡಿಸೋಜಾ, ಆಧ್ಯಾತ್ಮಿಕ ನಿರ್ದೇಶಕ ವಂ.ಫರ್ಡಿನಾಂಡ್ ಗೊನ್ಸಾಲ್ವಿಸ್, ಮಾನಸ ಸಂಸ್ಥೆ ರಜತ ಮಹೋತ್ಸವ ಸಮಿತಿ ಸಂಚಾಲಕರಾದ ಎಲ್ ರೋಯ್ ಕಿರಣ್ ಕ್ರಾಸ್ಟೊ, ಪ್ರಾಂಶುಪಾಲೆ ಸಿಸ್ಟರ್ ಅನ್ಸಿಲ್ಲಾ ಫೆರ್ನಾಂಡಿಸ್, ಕೆಥೊಲಿಕ್ ಸಭಾ ಮುಂಬೈನ ಅಧ್ಯಕ್ಷ ರಫಾಯೆಲ್ ಡಿಸೋಜಾ ಉಪಸ್ಥಿತರಿದ್ದರು.
ಮಾನಸ ಸಂಸ್ಥೆ ಅಧ್ಯಕ್ಷ ಹೆನ್ರಿ ಮಿನೇಜಸ್ ಸ್ವಾಗತಿಸಿ,ಕಾರ್ಯದರ್ಶಿ ಜೊಸೇಫ್ ನೊರೊನ್ಹಾ ವಂದಿಸಿದರು. ಅನಿತಾ ಡಿಸೋಜಾ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು.