ಕೇಂದ್ರ ಸರಕಾರದ ಯೋಜನೆಗಳು ಪಾರದರ್ಶಕವಾಗಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗುವಂತಾಗಿದೆ: ಶೋಭಾ ಕರಂದ್ಲಾಜೆ
ಉಡುಪಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಅಭಿವೃದ್ಧಿ ಕಾರ್ಯಗಳಿಗೆ ವೇಗವನ್ನು ನೀಡಿದೆ. ಸರಕಾರದ ಜನಪರ ಕಾರ್ಯಕ್ರಮಗಳು ಪಾರದರ್ಶಕವಾಗಿ ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಮಂಗಳವಾರ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ, ಕೇಂದ್ರ ಸರಕಾರ ಜಾರಿಗೊಳಿಸಿ ರುವ 13 ಜನಪ್ರಿಯ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನರೇಂದ್ರ ಮೋದಿ ನೇತೃತ್ವದ ಸರಕಾರದಿಂದ ದೇಶದ ಜನರ ಬದುಕಿಗೆ ನೆಮ್ಮದಿ ಹಾಗೂ ಸಂತೋಷ ನೀಡುವ, ಜೀವನ ಮಟ್ಟ ಸುಧಾರಿಸುವ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಸಾರ್ವಜನಿಕರ ತೆರಿಗೆಯ ಹಣದ ಪ್ರಯೋಜನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪಾರದರ್ಶಕವಾಗಿ ತಲುಪಿಸಲಾಗುತ್ತಿದೆ. ಜಾತಿ, ಧರ್ಮ, ಪಕ್ಷವನ್ನು ಮೀರಿದ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ ಎಂದರು.
ದೇಶವನ್ನು ರಕ್ಷಣಾ ಉಪಕರಣ, ರಸಗೊಬ್ಬರ ಮತ್ತು ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ಗುರಿ ಹೊಂದಿದ್ದು, ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗಿದೆ. ರಕ್ಷಣಾ ಉಪಕರಣ ಮತ್ತು ರಸಗೊಬ್ಬರದ ದೇಶೀಯ ಉತ್ಪಾದನೆ ಪ್ರಗತಿಯಲ್ಲಿದೆ. ಖಾದ್ಯ ತೈಲ ಬೆಳೆಯಲು ಶೇ.೯೦ ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ಯೋಜನೆಯ ಬಗ್ಗೆ ಅನ್ಯ ದೇಶಗಳು ಅಧ್ಯಯನ ಮಾಡುತ್ತಿವೆ ಎಂದರು.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅನುಷ್ಠಾನದಲ್ಲಿ ಇನ್ನಷ್ಟು ಪ್ರಗತಿಯಾಗಬೇಕಿದೆ. ಕೃಷಿ, ಮೀನುಗಾರಿಕೆ ಹಾಗೂ ಇತರ ವಲಯಗಳಲ್ಲಿ ಎಫ್‌ಪಿಓಗಳನ್ನು ರಚಿಸಿ ಕೇಂದ್ರಕ್ಕೆ ಕಳುಹಿಸಿದಲ್ಲಿ ಅದಕ್ಕೆ ಅನುಮೋದನೆ ನೀಡಲಾಗುವುದು ಕೃಷಿ ಉತ್ಪನ್ನಗಳ ದಾಸ್ತಾನು ಮಾಡಲು ಉಗ್ರಾಣಗಳ ನಿರ್ಮಾಣ, ಶೀತಲೀಕರಣ ಘಟಕಗಳ ನಿರ್ಮಾಣ, ಆಹಾರ ಗುಣಮಟ್ಟ ಪರೀಕ್ಷಿಸುವ ಲ್ಯಾಬ್‌ಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಲಿದ್ದು, ಇದರಿಂದ ಜಿಲ್ಲೆಯ ರೈತರ ಬೆಳೆಗಳಿಗೆ ಸೂಕ್ತ ಬೆಳೆ ದೊರೆಯುವುದರ ಜೊತೆಗೆ ಅವರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗಲಿದೆ ಎಂದರು.
ಶಾಸಕ ಕೆ.ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಯಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಎಚ್. ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾ ಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರದಾನ ಮಂತ್ರಿ ಆವಾಸ್ ಯೋಜನೆ, ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಪ್ರದಾನ ಮಂತ್ರಿ ಉಜ್ವಲ ಯೋಜನೆ, ಪ್ರದಾನ ಮಂತ್ರಿ ಸ್ವ ನಿಧಿ, ಪ್ರದಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ಪ್ರದಾನ ಮಂತ್ರಿ ಮುದ್ರಾ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ, ಪೋಷಣಾ ಅಭಿಯಾನ ಯೋಜನೆ, ಜಲ ಜೀವನ್ ಮಿಷನ್ ಯೋಜನೆಗಳ ಫಲಾನುಭವಿಗಳು ಸಂಸದರೊಂದಿಗೆ ಸಂವಾದ ನಡೆಸಿ ಯೋಜನೆಯಿಂದ ಪಡೆದ ಪ್ರಯೋಜನಗಳ ಬಗ್ಗೆ ವಿವರಿಸಿದರು.