ಕಾರ್ಕಳ: ವಿಶ್ವ ತಂಬಾಕು ವಿರೋಧಿ ದಿನಾಚರಣೆ

ಉಡುಪಿ : ಜಿಲ್ಲಾಡಳಿತ, ಜಿಪಂ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿ ಕಛೇರಿ ಕಾರ್ಕಳ, ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಮತ್ತು ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯವನ್ನು ತಾಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚೇತನಾ ಎಸ್. ಎಫ್. ಉದ್ಘಾಟಿಸಿ ತಂಬಾಕು ಉತ್ಪನ್ನಗಳ ಸೇವನೆ ದುಷ್ಪರಿಣಾಮಗಳು, ಅವುಗಳ ನಿಷೇದ ಕುರಿತಾದ ಕಾನೂನು ಮತ್ತು ಸೇವಾ ಸೌಲಭ್ಯಗಳು, ಲೋಕ ಅದಾಲತ್ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ತಂಬಾಕು ಸೇವನೆಯ ದುಷ್ಪರಿಣಾಮಗಳು, ಕೊಟ್ಪಾ ಕಾಯಿದೆ, ಹದಿಹರೆಯದವರು ತಂಬಾಕು ಸೇವನೆಗೆ ದಾಸರಾಗಿ ಜೀವನದಲ್ಲಿ ಎದುರಿಸುವ ಸಂಕಷ್ಟಗಳು ಹಾಗೂ ಇದನ್ನು ತಡೆಯುವುದು ಜಾಗೃತಿಯಿಂದ ಮಾತ್ರ ಸಾಧ್ಯ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕರಾದ ಕ್ಯಾತರೀನ್ ಜೆನಿಫರ್ ಸ್ಕಿಜೋಫ್ರೇನಿಯಾ ಕಾಯಿಲೆಯ ಗುಣಲಕ್ಷಣಗಳು, ಪರಿಹಾರೋಪಾಯಗಳು ಮತ್ತು ಚಿಕಿತ್ಸೆ ಕುರಿತಾಗಿ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರು ಹಾಗೂ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ ಶೋಭಾ ನಾಯಕ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ಸರಕಾರಿ ನರ್ಸಿಂಗ್ ಕಾಲೇದಿನ ಪ್ರಾಂಶುಪಾಲೆ ಸಜನಿ ಸುಬ್ರಮಣ್ಯ, ಉಪನ್ಯಾಸಕಿ ದಿವ್ಯಶ್ರೀ ಪಾಟೀಲ್, ಆಶಾ ಕಾರ್ಯಕರ್ತೆ ಯರು, ಸರಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ್ ಶೆಟ್ಟಿ ಸ್ವಾಗತಿಸಿ, ಆರೋಗ್ಯ ಸುರಕ್ಷಾಧಿಕಾರಿ ಅರುಣ ಪಿ. ವಂದಿಸಿದರು. ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್. ಕಾರ್ಯಕ್ರಮ ನಿರೂಪಿಸಿದರು.