ಮಂಗಳೂರು: ವಿದ್ಯಾರ್ಥಿ ಡಿಜಿಟಲ್ ಬಸ್ ಪಾಸ್ ವಿತರಣಾ ಕೇಂದ್ರ ಉದ್ಘಾಟನೆ
ಮಂಗಳೂರು : ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ. ದಯಾನಂದ ಪೈ, ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ದ.ಕ ಜಿಲ್ಲಾ ಬಸ್ ಮಾಲಕರ ಸಂಘ ಹಾಗೂ ಚಲೋ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿ ಡಿಜಿಟಲ್ ಬಸ್ ಪಾಸ್ ವಿತರಣಾ ಕೇಂದ್ರದ ಉದ್ಘಾಟನೆ ಮತ್ತು ಬಸ್ ಪಾಸ್ ವಿತರಣಾ ಕಾರ್ಯಕ್ರಮ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ದ.ಕ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಚಲೋ ಬಸ್ ಪಾಸ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು ನಲವತ್ತಕ್ಕೂ ಅಧಿಕ ವರ್ಷಗಳಿಂದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘ ಕಾರ್ಯನಿರ್ವಹಿಸುತ್ತಿದ್ದು ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಏನಾದರೂ ಒಳಿತು ಮಾಡಬೇಕೆಂದು ಎರಡು ವರ್ಷಗಳ ಹಿಂದೆ ಮುಂಬೈ ಮೂಲದ ಚಲೋ ಸಂಸ್ಥೆ ಮೂಲಕ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಕೊರೋನ ಕಾರಣದಿಂದ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲಾಗದಿದ್ದರೂ ಇದೀಗ ಹೆಚ್ಚಿನ ವಿದ್ಯಾರ್ಥಿಗಳು ಈ ಚಲೋ ಪಾಸ್‌ನ ಸದುಪಯೋಗ ಪಡೆಯುವ ಸಲುವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್. ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಜಂಟಿ ಕಾರ್ಯದರ್ಶಿ ರಾಜ್ ಕುಮಾರ್, ಕೋಶಾಧಿಕಾರಿ ಸತ್ಯರಾಜ್, ಚಲೋ ಸಂಸ್ಥೆಯ ಪ್ರತಿನಿಧಿಗಳಾದ ಅಮೃತ್ ಮಯ್ಯ, ಶಿವರಾಜ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕರ ಭಂಡಾರಿ, ವಿದ್ಯಾರ್ಥಿ ಕ್ಷೇಮಪಾಲಕ ಡಾ. ಸುಧಾಕರನ್ ಟಿ ಮತ್ತಿತರರು ಉಪಸ್ಥಿತರಿದ್ದರು.