ಜೂನ್ ಮಾಸಾಂತ್ಯಕ್ಕೆ ಕೆಎಎಸ್ ಫಲಿತಾಂಶ ಪ್ರಕಟ: ಎಸ್.ಸುರೇಶ್‍ಕುಮಾರ್

ಬೆಂಗಳೂರು, ಮೇ 31: ಜೂನ್ ಮಾಸಾಂತ್ಯಕ್ಕೆ 2021ರ ಕೆಎಎಸ್ ಮುಖ್ಯ ಪರೀಕ್ಷೆಯ ಫಲಿತಾಂಶಗಳು ಪ್ರಕಟಗೊಳ್ಳಲಿವೆ. ಈ ಕುರಿತಂತೆ ಆಯೋಗದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಮಗೆ ಸ್ಪಷ್ಟ ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ನೂರಾರು ಉದ್ಯೋಗಾಕಾಂಕ್ಷಿಗಳೊಂದಿಗೆ ಕೆಪಿಎಸ್‍ಸಿ ಮುಖ್ಯದ್ವಾರದ ಬಳಿ ನಿಂತು ತಾವು ಬಾಗಿಲು ತಟ್ಟಿದ ಸಂದರ್ಭದಲ್ಲಿ ತಮ್ಮೊಂದಿಗೆ ದೂರವಾಣಿ ಮೂಲಕ ಆಯೋಗದ ಕಾರ್ಯದರ್ಶಿಯವರು ಮಾತನಾಡಿ ಮಾಹಿತಿ ನೀಡಿದ್ದು, ನಂತರ ಕೆಪಿಎಸ್‍ಸಿ ಅಧ್ಯಕ್ಷರು, ಆರು ಜನ ಸದಸ್ಯರು ಹಾಗೂ ಆಯೋಗದ ಇತರೆ ಅಧಿಕಾರಿಗಳೊಂದಿಗೆ ತಾವು ಸುದೀರ್ಘ ಚರ್ಚೆ ನಡೆಸಿದ್ದೇನೆ. 106 ಕೆಎಎಸ್ ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮಗೊಳ್ಳುತ್ತಿರುವ 1:3 ಪಟ್ಟಿಯನ್ನು ಜೂನ್ ಮಾಸಾಂತ್ಯಕ್ಕೆ ಅಧಿಕೃತ ಪ್ರಕಟಣೆ ಮಾಡಲಾಗುತ್ತದೆ ಎನ್ನುವ ಭರವಸೆಯನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಉಳಿದ ಹುದ್ದೆಗಳ ನೇಮಕಾತಿ ಶೀಘ್ರ: ಇದೇ ಸಂದರ್ಭದಲ್ಲಿ ಕೆಪಿಎಸ್‍ಸಿ ಈ ಹಿಂದೆ ನಡೆಸಿರುವ ವಿವಿಧ ಪರೀಕ್ಷೆಗಳ ಫಲಿತಾಂಶಗಳ ಕುರಿತಂತೆ ಮಾಹಿತಿ ಆಗ್ರಹಿಸಿದ ಸುರೇಶ್ ಕುಮಾರ್ ಅವರಿಗೆ ಆಯೋಗದ ಅಧ್ಯಕ್ಷರ ತಂಡವು ಹುದ್ದೆವಾರು ಭರವಸೆಗಳನ್ನು ನೀಡಿತು. ಅದರಂತೆ 1,150 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ಮುಂದಿನ ಹತ್ತು ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ.
1,136 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿಯನ್ನು 2022ರ ಜೂನ್ 10ರ ಒಳಗಾಗಿ ಪ್ರಕಟವಾಗಲಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪದವೀಧರ ಚಿತ್ರಕಲಾ ಶಿಕ್ಷಕರ ಹುದ್ದೆಗಳಿಗೆ 15 ದಿನಗಳ ಒಳಗಾಗಿ ಅಂತಿಮ ಆಯ್ಕೆಪಟ್ಟಿ ಪ್ರಕಟವಾಗಲಿದೆ. ದ್ವಿತೀಯ ದರ್ಜೆ ಸಹಾಯಕರ 1,323 ಹುದ್ದೆಗಳಿಗೆ ಮೌಲ್ಯಮಾಪನ ಕಾರ್ಯವು ಪ್ರಗತಿಯಲ್ಲಿದ್ದು, ಮುಂದಿನ 40 ರಿಂದ 45 ದಿನಗಳಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾಗಲಿದೆ.
ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರು ಗ್ರೇಡ್-1 ಮತ್ತು ಸಹಾಯಕ ಅಭಿಯಂತರರ ಒಟ್ಟು 990 ಹುದ್ದೆಗಳಿಗೆ ಡಿಸೆಂಬರ್ 2021ರಲ್ಲಿ ನಡೆದ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ನಡೆಯುತ್ತಿದೆ. ಅತಿ ಶೀಘ್ರದಲ್ಲಿ ಪಟ್ಟಿ ಪ್ರಕಟವಾಗಲಿದೆ. ಈ ಎಲ್ಲ ಹುದ್ದೆಗಳ ಫಲಿತಾಂಶ ಪ್ರಕಟಣೆ, ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಣೆ ಹಾಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆ ಕುರಿತು ಪ್ರಸ್ತುತ ಹಂತದ ವಿವರಗಳನ್ನು ಅತೀ ಶೀಘ್ರದಲ್ಲಿಯೇ ಆಯೋಗದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುವುದು ಎಂದು ಕೆಪಿಎಸ್‍ಸಿ ತಿಳಿಸಿದೆ ಎಂದು ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ.
ದಕ್ಷ ಕಾರ್ಯದರ್ಶಿ ನೇಮಕವಾಗಲಿ: ಕೆಪಿಎಸ್‍ಸಿಗೆ ಪೂರ್ಣಕಾಲಿಕ, ದಕ್ಷ ಕಾರ್ಯದರ್ಶಿ ನೇಮಕವಾಗಬೇಕು. ಆಯೋಗದಲ್ಲಿ ಸದಸ್ಯರು ಹಾಗೂ ಆಡಳಿತ ವಿಭಾಗದ ನಡುವೆ ಇರುವ ಸಮನ್ವಯ ಕೊರತೆಯ ಕಾರಣ, ಈ ಉನ್ನತ ಮಟ್ಟದ ನೇಮಕ ಸಂಸ್ಥೆಯ ಕಾರ್ಯ ನಿರ್ವಹಣೆಯ ಮೇಲೆ ಹಲವಾರು ನಕಾರಾತ್ಮಕ ಪರಿಣಾಮಗಳು ಉಂಟಾಗಿವೆ. ಇವುಗಳ ತಾರ್ಕಿಕ ಅಂತ್ಯ ಆಗದ ಹೊರತು ಸಂಸ್ಥೆಯ ಕುರಿತಾದ ಭಾವನೆ ಬದಲಾಗದು. ಈ ಬಗ್ಗೆ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಕೆಪಿಎಸ್‍ಸಿ ತನ್ನ ಕಾರ್ಯ ವೈಖರಿಯನ್ನು ಬದಲಾಯಿಸಿಕೊಳ್ಳಬೇಕಾದ ತುರ್ತು ಅನಿವಾರ್ಯತೆ ಇದೆ ಎಂದು ಸುರೇಶ್ ಕುಮಾರ್ ಹೇಳಿದರು. ಸುರೇಶ್ ಕುಮಾರ್ ಅವರೊಂದಿಗೆ ನೂರಾರು ಉದ್ಯೋಗಾಂಕ್ಷಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಸಮನ್ವಯ ಕೊರತೆ-ಸಿಎಂ ಜತೆ ಚರ್ಚೆ
ಉದ್ಯೋಗಸೌಧ, ವಿಶ್ವಾಸಸೌಧವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದು ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದಿರುವ ಮಾಜಿ ಸಚಿವ ಸುರೇಶ್ ಕುಮಾರ್, ಉದ್ಯೋಗಾಕಾಂಕ್ಷಿಗಳಲ್ಲಿ ವ್ಯವಸ್ಥೆಯ ಬಗ್ಗೆ ಸಿನಿಕತೆ ಮೂಡಿಸದ ಹಾಗೆ ಅದು ಕಾರ್ಯ ನಿರ್ವಹಿಸಬೇಕು. ತನ್ನ ಪಾರದರ್ಶಕ ನಡವಳಿಕೆಯ ಮೂಲಕ ಜನರಲ್ಲಿ ಸರಕಾರಿ ವ್ಯವಸ್ಥೆಯ ಬಗ್ಗೆ ವಿಶ್ವಾಸ ಮೂಡಿಸಬೇಕೆಂದು ವಿವರಿಸಿದ್ದೇನೆಂದರು.







