ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರವೇಶ ಮಿತಿ ಹೆಚ್ಚಳ; ಅರ್ಜಿ ಸಲ್ಲಿಕೆಗೆ ಜೂ.5ರವರೆಗೆ ದಿನಾಂಕ ವಿಸ್ತರಣೆ

ಬೆಂಗಳೂರು, ಮೇ 31: 2022-23ನೆ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿನ ಖಾಸಗಿ ಅನುದಾನಿತ/ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗೆ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿಗೆ ಮತ್ತು ಹೊಸ ಭಾಷೆ, ಹೊಸ ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳ ಮಂಜೂರಾತಿ ಸಂಬಂಧ ಆನ್-ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಜೂ.5ರ ರಾತ್ರಿ 12ರವರೆಗೆ ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯು 2022-23ನೆ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತವಾಗಿರುತ್ತದೆ.
ಪ್ರತಿ ಸಂಯೋಜನೆಯ ಒಂದು ವಿಭಾಗಕ್ಕೆ ಮಾತ್ರ ಜಿಲ್ಲಾ ಹಂತದಲ್ಲಿ 20 ವಿದ್ಯಾರ್ಥಿಗಳ ದಾಖಲಾತಿಗೆ ನಿಯಮಾನುಸಾರ ಪರಿಶೀಲಿಸಿ, ಅನುಮತಿ ನೀಡುವುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ಸಂಯೋಜನೆಗಳಿದ್ದಲ್ಲಿ ನಿಯಮಾನುಸಾರ ಹೆಚ್ಚುವರಿ ವಿಭಾಗದ ಮಂಜೂರಾತಿಗೆ ಆನ್-ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಕ್ರಮವಹಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Next Story





