VIDEO- ಹಸಿರು ಶಾಲು ಕೈಬಿಡಲು ನಾನು ಅಪರಾಧಿಯಲ್ಲ: ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಮೇ 31: ಹಸಿರು ಶಾಲು ಧರಿಸದೆ ಇರಲು ನಾನು ಅಪರಾಧಿಯಲ್ಲ. ಆರೋಪಿ ಮಾತ್ರ ನನ್ನ ರೈತ ಪರ ಹೋರಾಟ ಮುಂದುವರೆಯಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಹಲವು ಚಳವಳಿಗಳಲ್ಲಿ ಭಾಗಿಯಾಗಿದ್ದು, ಎಲ್ಲಿಯಾದರೂ ದುರ್ಬಳಕೆ ಮಾಡಿಕೊಂಡಿದ್ದು ಸಾಬೀತಾದಲ್ಲಿ ಸ್ವತಃ ಚಳವಳಿಯಿಂದ ದೂರು ಉಳಿಯುತ್ತೇನೆ. ನನ್ನ ವಿರುದ್ಧ ಸಾಕ್ಷಗಳಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಿ ಎಂದರು.
ನನ್ನ ವಿರುದ್ಧದ ಆರೋಪ ಸಂಬಂಧ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ತನಿಖೆ ನಡೆದು ನನ್ನನ್ನ ಆರೋಪ ಮುಕ್ತರನ್ನಾಗಿ ಮಾಡಬೇಕು ಎಂದು ಅವರಲ್ಲಿ ಮನವಿ ಮಾಡಿರುವುದಾಗಿ ಹೇಳಿದರು.
ರೈತ ಸಂಘದ ರಾಷ್ಟ್ರೀಯ ನಾಯಕರಾದ ರಾಕೇಶ್ ಟಿಕಾಯತ್, ಯದುವೀರ್‍ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ಮಸಿ ಎರಚಿರುವುದು ಅತ್ಯಂತ ಖಂಡನೀಯ. ಈ ರೀತಿಯ ಘಟನೆಗಳು ನಡೆಯಬಾರದಿತ್ತು. ರೈತ ಸಂಘದ ಮುಖಂಡರಲ್ಲಿ ತಪ್ಪುಗಳಿದ್ದಲ್ಲಿ ಪ್ರತಿಭಟಿಸಬಹುದು ಎಂದು ಕೋಡಿಹಳ್ಳಿ ಹೇಳಿದರು.
ರೈತರ ಧ್ವನಿ ಬಲಿಷ್ಠ
ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು 2011ರಲ್ಲಿ ಉಚ್ಛಾಟನೆ ಮಾಡಿದ್ದ ಬಳಿಕ ಹೊಸ ಸಂಘಟನೆ ರಚಿಸಿಕೊಂಡರು ಎಂಬ ಆರೋಪವಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಎಲ್ಲಿಯೂ ಯಾರನ್ನು ಉಚ್ಛಾಟನೆ ಮಾಡಿಲ್ಲ. ಹೊರಬಂದು ಸಂಘಟನೆ ರಚನೆ ಮಾಡಿಲ್ಲ. ಇದೆಲ್ಲವು ಸತ್ಯಕ್ಕೆ ದೂರವಾದ ಮಾತು. ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಲಗೊಳ್ಳುತ್ತಿದೆ. ರೈತರ ಧ್ವನಿಯಾಗಿ ಬಲಿಷ್ಠವಾಗಿ ಬೆಳೆಯುವುದರ ಜತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
ನಂಜುಂಡಸ್ವಾಮಿ ಬಳಿಕ ನಾನೇ ಅಧ್ಯಕ್ಷ
ರೈತ ನಾಯಕ ನಂಜುಂಡಸ್ವಾಮಿ ಅವರು ಕಟ್ಟಿದ ರೈತ ಸಂಘವಿದು. ಅವರ ನಂತರ ನಾನೇ ಅಧ್ಯಕ್ಷನಾಗಿ ಮುನ್ನಡೆಸಿದ್ದೇನೆ. ನಾನು ಯಾವ ತಪ್ಪನ್ನೂ ಮಾಡಿಲ್ಲ. ಯಾರೋ ಮಾಡಿದ ಕುತಂತ್ರಕ್ಕೆ ನಾನು ಹೆದರಲ್ಲ. ನನ್ನ ಕೈ-ಬಾಯಿ ಎರಡೂ ಶುದ್ಧವಿದೆ. ಅಲ್ಲದೆ, ಶಿವಮೊಗ್ಗದ ನಿರ್ಣಯ ನಮಗೆ ಅನ್ವಯ ಆಗಲ್ಲ. ಅವರದ್ದೇ ಬೇರೆ, ನಮ್ಮದೇ ಬೇರೆ ರೈತ ಸಂಘಟನೆ. ಅವರು ನನ್ನನ್ನು ಹೇಗೆ ಉಚ್ಚಾಟಿಸೋಕೆ ಬರುತ್ತೆ. ಅವರು ಅವರ ಸಂಘಟನೆಯವರನ್ನು ಉಚ್ಛಾಟಿಸಬಹುದು. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.







