ಪ್ರಚಾರಕ್ಕಾಗಿ ಸುರೇಶ್ ಕುಮಾರ್ ಕೆಪಿಎಸ್ಸಿ ಮುಂದೆ ವಾಚ್‍ಮೆನ್ ಕೆಲಸ: ರಮೇಶ್ ಬಾಬು ಟೀಕೆ

ಬೆಂಗಳೂರು, ಮೇ 31: ‘ಆಡಳಿತ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಕೆಪಿಎಸ್ಸಿ ವಿರುದ್ಧ ಪ್ರತಿಭಟನೆಯ ನಾಟಕವನ್ನು ಬಿಟ್ಟು, ರಾಜ್ಯದಲ್ಲಿ ಖಾಲಿಯಿರುವ ಎರಡೂವರೆ ಲಕ್ಷ ಉದ್ಯೋಗಗಳನ್ನು ತುಂಬಲು ತಮ್ಮದೇ ಸರಕಾರದ ಮೇಲೆ ಮತ್ತು ಪಕ್ಷದ ಮೇಲೆ ಒತ್ತಡ ಹಾಕಬೇಕು. ಪ್ರಚಾರದ ಪ್ರತಿಭಟನೆಯನ್ನು ಕೂಡಲೇ ನಿಲ್ಲಿಸಬೇಕು' ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಯಾವುದೇ ಸಂದರ್ಭದಲ್ಲಿ ಒಂದು ಆಡಳಿತ ಪಕ್ಷದ ಶಾಸಕರು ತಮ್ಮದೇ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಅದು ಆ ಸರಕಾರದ ವೈಫಲ್ಯವನ್ನು ಸಾರುತ್ತದೆ ಅಥವಾ ಶಾಸಕರ ಸ್ವಹಿತಾಸಕ್ತಿಯ ಅನುಮಾನ ಹುಟ್ಟಿಸುತ್ತದೆ. ಕೆಲವು ಸಂದರ್ಭದಲ್ಲಿ ಜನರ ಕಿವಿಗೆ ಹೂವು ಮುಡಿಸುವ ಕಾರಣಕ್ಕೆ ಸೋಗಲಾಡಿ ಶಾಸಕರು ಇಂತಹ ಪ್ರತಿಭಟನೆಗಳಿಗೆ ಮುಂದಾಗುತ್ತಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
‘ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಕೆಪಿಎಸ್ಸಿ ಗೇಟನ್ನು ಕಾಯುವ ಪ್ರತಿಭಟನೆಗೆ ಮುಂದಾಗಿದ್ದಾರೆ. ಅತಿವೃಷ್ಟಿ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಮೊಳಕಾಲುದ್ದ ನೀರಿನಲ್ಲಿ ದೋಣಿ ಹಾಯಿಸಿ ನಗೆಪಾಟಲಿಗೆ ಈಡಾದ ಬಿಜೆಪಿ ಶಾಸಕ ರೇಣುಕಾಚಾರ್ಯ ಪ್ರತಿಭಟನೆಗೂ ಮತ್ತು ಸುರೇಶ್ ಕುಮಾರ್ ಪ್ರತಿಭಟನೆಗೂ ಯಾವುದೇ ವ್ಯತ್ಯಾಸವಿಲ್ಲ' ಎಂದು ರಮೇಶ್ ಬಾಬು ಟೀಕಿಸಿದ್ದಾರೆ.
‘2016-17ರಿಂದ ಇಲ್ಲಿಯವರೆಗೆ ಕೆಪಿಎಸ್ಸಿ ವಿವಿಧ ಇಲಾಖೆಯ ಒಟ್ಟು 5,545 ಹುದ್ದೆಯ ನೇಮಕಾತಿಗೆ (ಹೈ.ಕ. ಸಹಿತವಾಗಿ) ಅಧಿಸೂಚನೆ ಮೂಲಕ ಪ್ರಕ್ತಿಯೆಗಳನ್ನು ನಡೆಸಿದ್ದು, ಅಂತಿಮ ನೇಮಕಾತಿ ಬಾಕಿಯಿರುತ್ತದೆ. ಇವುಗಳಲ್ಲಿ ಪ್ರಮುಖವಾಗಿ 2017-18ನೆ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳೂ ಸೇರಿರುತ್ತವೆ. ಸಿದ್ದರಾಮಯ್ಯರ ಸರಕಾರದ ಅವಧಿಯಲ್ಲಿ 106 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ ಮೂಲಕ ಕ್ರಮ ಕೈಗೊಳ್ಳಲಾಗಿತ್ತು.
ಪ್ರತಿವರ್ಷ ಗೆಜೆಟೆಡ್ ಹುದ್ದೆಗಳ ನೇಮಕಾತಿ ಮಾಡಲು ಸರಕಾರದ ಅಧಿಸೂಚನೆ ಇದ್ದರೂ, ಇಲ್ಲಿಯವರೆಗೆ ಬಿಜೆಪಿಯ ಸರಕಾರ ಖಾಲಿಯಿರುವ ಯಾವುದೇ ಹುದ್ದೆಗಳನ್ನು ತುಂಬಲು ಪ್ರಯತ್ನಿಸಿರುವುದಿಲ್ಲ. ಇದರ ಸತ್ಯ ತಿಳಿದಿದ್ದರೂ ಅಧಿವೇಶನದಲ್ಲಿ ಆಗಲಿ ಅಥವಾ ಸಾರ್ವಜನಿಕವಾಗಲಿ ಸರಕಾರವನ್ನು ಪ್ರಶ್ನೆ ಮಾಡದ ಸುರೇಶ್ ಕುಮಾರ್ ಪ್ರಚಾರಕ್ಕಾಗಿ ವಾಚ್‍ಮೆನ್ ಕೆಲಸಕ್ಕೆ ಮುಂದಾಗಿದ್ದಾರೆ. ಇದೇ ಶಾಸಕರು ಪ್ರಚಾರಕ್ಕಾಗಿ ತಮ್ಮ ಮನೆಯ ಮುಂದೆ ಕೇವಲ ಒಂದು ದಿನ ಕಸ ಗುಡಿಸಿ ಪೋಸು ಕೊಟ್ಟಿದ್ದನ್ನು ಜನರು ಮರೆತಿಲ್ಲ!' ಎಂದು ಅವರು ಲೇವಡಿ ಮಾಡಿದ್ದಾರೆ.
ಕೆಪಿಎಸ್ಸಿ ವಿವಿಧ ನೇಮಕಾತಿಗಳಿಗೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆಯ 150 ಮೋಟಾರು ವಾಹನ ನಿರೀಕ್ಷಕರು, ವಸತಿ ಶಿಕ್ಷಣ ಸಂಸ್ಥೆಯ 460 ಚಿತ್ರಕಲಾ ಶಿಕ್ಷಕರು, ಉದ್ಯೋಗ ಮತ್ತು ತರಬೇತಿ ಇಲಾಖೆಯಲ್ಲಿ 636 ಹುದ್ದೆಗಳು, 100 ಗೆಜೆಟೆಡ್ ಹುದ್ದೆಗಳು, ವಿವಿಧ ಇಲಾಖೆಗಳ 1,136 ಪ್ರಥಮದರ್ಜೆ ಸಹಾಯಕರು, 1,323 ಕಿರಿಯ ಸಹಾಯಕರು, ಆಯುಷ್ ಇಲಾಖೆಯ 142 ಬ್ಯಾಕ್‍ಲಾಗ್/ಹೈಕ ಹುದ್ದೆಗಳು, ಲೋಕೋಪಯೋಗಿ ಇಲಾಖೆಯ 660 ಸಹಾಯಕ ಇಂಜಿನಿಯರ್, 330 ಕಿರಿಯ ಇಂಜಿನಿಯರ್, ಇತರೆ ಇಲಾಖೆಗಳ 523 ಹುದ್ದೆಗಳು, ಒಟ್ಟಾರೆ 5,545 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಇವುಗಳಲ್ಲಿ ಕೆಲವು ಹುದ್ದೆಗಳ ಪರೀಕ್ಷಾ ಫಲಿತಾಂಶವನ್ನು 2022ರ ಮೇ 31ಕ್ಕೆ ಆಯೋಗ ನಿಗದಿತ ಸಮಯದಂತೆ ಪ್ರಕಟಿಸಬೇಕಾಗಿರುತ್ತದೆ.
ಅಲ್ಲದೆ ಜೂನ್ ಅಂತ್ಯದ ಒಳಗೆ ಕೆಲವು ಫಲಿತಾಂಶಗಳನ್ನು ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ರಾಜ್ಯ ಸರಕಾರದ ಅಸಮರ್ಥ ಅಧ್ಯಕ್ಷರ ನೇಮಕ, ಕಾರ್ಯದರ್ಶಿ ಬದಲಾವಣೆ ಮತ್ತು ನಿಭಂದಕರ ವರ್ಗಾವಣೆ ನೀತಿಗಳಿಂದ ನಿಧಾನಗತಿಯ ಜೊತೆಗೆ ಉದ್ಯೋಗ ಬಯಸುತ್ತಿರುವ ಆಕಾಂಕ್ಷಿಗಳಿಗೆ ತೊಂದರೆಯಾಗುತ್ತಿದೆ. ಇವೆಲ್ಲಾ ಸತ್ಯಗಳನ್ನು ಮುಚ್ಚಿಟ್ಟು ಜನರ ಕಿವಿಗೆ ಹೂವು ಮುಡಿಸಲು ಮುಂದಾಗಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್‍ರವರ ನಾಟಕ ರಂಜನೀಯವಾಗಿದೆ' ಎಂದು ರಮೇಶ್ ಬಾಬು ವ್ಯಂಗ್ಯವಾಡಿದ್ದಾರೆ.







