VIDEO - ಅಯೋಗ್ಯರ ಮಧ್ಯೆ ನನ್ನ ಹೆಸರು ಇಷ್ಟವಿಲ್ಲ: ಸಾಹಿತಿ ಜಿ.ರಾಮಕೃಷ್ಣ

ಬೆಂಗಳೂರು, ಮೇ 31: ಪಠ್ಯ ಪುಸ್ತಕ ಪರಿಷ್ಕರಣೆ ಪ್ರಕ್ರಿಯೆ ಸೂಕ್ತ, ಕಾನೂನುಬದ್ಧವಾಗಿ ನಡೆದಿಲ್ಲ. ಅದರಲ್ಲೂ ಅಯೋಗ್ಯರ ಮಧ್ಯೆ ನನ್ನ ಹೆಸರು ಸೇರಿಸುವುದು ನನಗೆ ಇಷ್ಟವಿಲ್ಲ ಎಂದು ಚಿಂತಕ, ಹಿರಿಯ ಸಾಹಿತಿ ಜಿ.ರಾಮಕೃಷ್ಣ ಹೇಳಿದರು.
ಮಂಗಳವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆ, ಎಸ್‍ಎಫ್‍ಐ, ಎನ್‍ಎಸ್‍ಯುಐ, ಬೆಂಗಳೂರು ವಿವಿಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಸೇರಿದಂತೆ ಹತ್ತಾರು ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೊಸ ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗ, ಲೇಖಕರ ಅನುಮತಿ ಕೇಳಬೇಕು ಅಲ್ಲವೇ, ಅವರ ಇಷ್ಟದಂತೆ ಮಾಡುವ ಸ್ವಾತಂತ್ರ್ಯ ಇದರಲ್ಲಿ ಇಲ್ಲ. ಈ ಹಿಂದೆ ಸಮಿತಿಯು ಲೇಖನ ಬಳಕೆಗೆ ಅನುಮತಿ ಕೇಳಿದಾಗ, ನಾವು ಅನುಮತಿ ಕೊಟ್ಟಿದ್ದೆವು. ಆದರೆ ಈಗ ಇಂತಹ ಅಯೋಗ್ಯರ ಮಧ್ಯೆ ನನ್ನ ಹೆಸರು ಬರುವುದು ಇಷ್ಟ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಮುಖವಾಗಿ ಶಿಕ್ಷಣ ಕ್ಷೇತ್ರದಲ್ಲಿರುವ ಒಬ್ಬ ಮಹಿಳಾ ತಜ್ಞರು ಸಮಿತಿಯಲ್ಲಿ ಇಲ್ಲ. ಸ್ವಾಮಿ ನಿಮ್ಮ ಪಾಂಡಿತ್ಯವನ್ನ ಪಠ್ಯ ಪರಿಷ್ಕರಣೆಯಲ್ಲಿ ಸೇರುಸುತ್ತೀರಾ? ಲೇಖಕರಿಗೆ ಮಾಹಿತಿ ನೀಡದೆ ನೀವು ಹೇಗೆ ಪರಿಷ್ಕರಣೆ ಮಾಡಿದ್ದೀರಿ? ನಿಮ್ಮ ಪಾಠ ಕೈಬಿಡುತ್ತೇವೆ ಅಥವಾ ಸೇರುಸುತ್ತೇವೆ ಎಂದೂ ಮಾಹಿತಿ ನೀಡಿಲ್ಲ. ಹಾಗಾಗಿ, ಈ ಪಠ್ಯಪರಿಷ್ಕರಣೆಯನ್ನು ಈ ಕೂಡಲೇ ರದ್ದು ಮಾಡಬೇಕು ಎಂದು ಅವರು ಹೇಳಿದರು.
ಯಾರೂ ಸಹ ನನ್ನ ಪಾಠದ ಬಗ್ಗೆ ಮಾಹಿತಿ ಕೇಳಿಲ್ಲ. ನಿಮಗೆ ಭಗತ್ ಸಿಂಗ್ ಬೇಡವೇ ಎಂದು ಪ್ರಶ್ನಿಸಿದ ಅವರು, ಭಗತ್ ಸಿಂಗ್ ಬಿಟ್ಟು ಬೇರೆ ಯಾರ ಪಾಠ ಹಾಕುತ್ತೀರಾ? ಅಲ್ಲದೆ, ನನ್ನ ಲೇಖನ ಪಠ್ಯದಲ್ಲಿ ಸೇರಿಸುವುದಕ್ಕೆ ನನ್ನ ಸಂಪೂರ್ಣ ವಿರೋಧ ಇದೆ. ಸಮಿತಿ ಕಾನೂನು ರೀತಿಯಲ್ಲಿ ಇರುವಂತದ್ದಲ್ಲ. ಇದು ಶಿಕ್ಷಣ ಕ್ಷೇತ್ರದ ಅವನತಿಯ ಹಾದಿ ಎಂದು ನುಡಿದರು.
ಯಜ್ಞದಿಂದ ವಿದ್ಯಾರ್ಥಿಗಳಿಗೇನು ಲಾಭ?
ಸಮಿತಿಗೆ ನನ್ನ ಪತ್ರ ತಲುಪಿಲ್ಲ ಎನ್ನುತ್ತಾರೆ ಕೆಲ ಅಯೋಗ್ಯರು. ನಾನು ವಿಳ್ಳೇದೆಲೆ ಕೊಟ್ಟು ಪತ್ರ ಕಳುಹಿಸಬೇಕಾ ಎಂದು ಪ್ರಶ್ನಿಸಿದ ಅವರು, ಯಜ್ಞದ ಬಗ್ಗೆ ಪಾಠ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಲಾಭವೇನು ಎಂದರು.







