30 ವಿಮಾನಗಳೊಂದಿಗೆ ತೈವಾನ್ ರಕ್ಷಣಾ ವಲಯ ಪ್ರವೇಶಿಸಿದ ಚೀನಾ
ತೈಪೆ, ಮೇ 31: ಚೀನಾವು 20 ಯುದ್ಧವಿಮಾನ ಸಹಿತ 30 ವಿಮಾನಗಳೊಂದಿಗೆ ತೈವಾನ್‌ನ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿದೆ ಎಂದು ತೈವಾನ್ ಹೇಳಿದ್ದು ಇದು ತೈವಾನ್ ಮೇಲೆ ಈ ವರ್ಷ ಚೀನಾ ನಡೆಸಿದ 2ನೇ ಬೃಹತ್ ಆಕ್ರಮಣವಾಗಿದೆ ಎಂದು ವರದಿಯಾಗಿದೆ.
ತಕ್ಷಣ ತನ್ನ ಯುದ್ಧವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಮತ್ತು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಈ ವಲಯದಲ್ಲಿ ನಿಯೋಜಿಸಲಾಗಿದೆ ಎಂದು ತೈವಾನ್‌ನ ರಕ್ಷಣಾ ಇಲಾಖೆ ಸೋಮವಾರ ಹೇಳಿದೆ. ಈ ವರ್ಷದ ಜನವರಿ 23ರಂದು ಚೀನಾದ 39 ವಿಮಾನಗಳು ತೈವಾನ್‌ನ ಎಡಿಐಝೆಡ್(ವಾಯು ರಕ್ಷಣಾ ಗುರುತಿಸುವಿಕೆ ವಲಯ) ಪ್ರವೇಶಿಸಿದ್ದವು. ಎಡಿಐಝೆಡ್ ತೈವಾನ್‌ನ ಪ್ರಾದೇಶಿಕ ವಾಯುಪ್ರದೇಶಕ್ಕಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಒಳಗೊಂಡಿದೆ ಮತ್ತು ಚೀನಾದ ವಾಯುರಕ್ಷಣಾ ಗುರುತಿಸುವಿಕೆ ವಲಯಕ್ಕೂ ವ್ಯಾಪಿಸಿದೆ ಹಾಗೂ ತೈವಾನ್‌ನ ಚೀನಾದ ಕೆಲ ಭಾಗಗಳನ್ನು ಒಳಗೊಂಡಿದೆ.
ಎಡಿಐಝೆಡ್‌ನ ನೈಋತ್ಯ ವಲಯದಲ್ಲಿ ಚೀನಾದ ವಿಮಾನಗಳು ಎಡಿಐಝೆಡ್‌ನೊಳಗೆ ಪ್ರವೇಶಿಸಿರುವುದು ಹಾಗೂ ಕೆಲ ಸಮಯದ ಬಳಿಕ ಹಿಂದೆ ಹಾರಿ ಹೋಗಿರುವ ಫೊಟೋವನ್ನು ತೈವಾನ್‌ನ ರಕ್ಷಣಾ ಇಲಾಖೆ ಪ್ರಕಟಿಸಿದೆ. ಚೀನಾವು ಪ್ರಚೋದನಕಾರಿ ಕ್ರಮಗಳಿಂದ ಈ ವಲಯದಲ್ಲಿ ಅಸ್ಥಿರತೆಗೆ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ಪ್ರತಿಕ್ರಿಯಿಸಿದೆ.
ಸ್ವಯಂ ಆಡಳಿತದ ಪ್ರಜಾಪ್ರಭುತ್ವ ದೇಶವಾಗಿರುವ ತೈವಾನ್ ತನ್ನ ಪ್ರಾದೇಶಿಕ ವ್ಯಾಪ್ತಿಗೆ ಸೇರಿದೆ ಎಂದು ವಾದಿಸುತ್ತಿರುವ ಚೀನಾ ಒಂದಲ್ಲ ಒಂದು ದಿನ ಅದನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ(ಅಗತ್ಯ ಬಿದ್ದರೆ ಬಲಪ್ರಯೋಗಿಸಿ) ಹಲವು ಬಾರಿ ಹೇಳಿದೆ.