ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆ

ಉಳ್ಳಾಲ: ಅಕ್ರಮ ಡೋರ್ ನಂಬರ್, ಉದ್ದಿಮೆ ಪರವಾನಿಗೆ, ಅಧಿಕಾರಿಗಳಗೈರು ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆದು ಗದ್ದಲದ ವಾತಾವರಣ ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರ ಸಭೆ ಅಧ್ಯಕ್ಷ ಚಿತ್ರ ಕಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸದಸ್ಯ ದಿನಕರ್ ಉಳ್ಳಾಲ ಮಾತನಾಡಿ, ಸಾಮಾನ್ಯ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಬರುವಂತೆ ಮಾಡಬೇಕು ಎಂದು ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೂ ಕೂಡಾ ಅಧಿಕಾರಿಗಳು ಬರುವುದಿಲ್ಲ. ಈ ಬಗ್ಗೆ ಡಿಸಿ ಗೆ ಮನವಿ ಮಾಡಿದ್ದೀರಾ ಎಂದು ಪ್ರಶ್ನಿಸಿದ ಅವರು ಇಲ್ಲದಿದ್ದರೆ ನಾನೇ ಸಚಿವರ, ಜಿಲ್ಲಾಧಿಕಾರಿ ಗಳ ಗಮನ ಹರಿಸುತ್ತೇನೆ ಎಂದರು.
ಅಕ್ರಮವಾಗಿ ಡೋರ್ ನಂಬರ್, ಉದ್ದಿಮೆ ಪರವಾನಿಗೆ ನಗರ ಪಂಚಾಯತ್ ವತಿಯಿಂದ ನೀಡಿದ ಬಗೆ ಕೌನ್ಸಿಲರ್ ಅಝೀಝ್ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಭೆಯಲ್ಲಿ ಕೋಲಾಹಲ ಸೃಷ್ಟಿಯಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಾಯಪ್ಪ ಅವರು, ಅಕ್ರಮ ಡೋರ್ ನಂಬರ್, ಉದ್ದಿಮೆ ಪರವಾನಿಗೆ ನೀಡಿದ ಬಗೆ ನನ್ನ ಗಮನಕ್ಕೆ ಬಂದಿದೆ. ಒಳಪೇಟೆಯಲ್ಲಿ ಒಂದೆಡೆ ಡೋರ್ ನಂಬರ್ ನೀಡಲಾಗಿತ್ತು.ಈ ಬಗ್ಗೆ ತನಿಖೆ ನಡೆಸಲಾಗಿದೆ ಎಂದರು. ಇದರಿಂದ ಆಕ್ರೋಶ ಗೊಂಡ ಕೌನ್ಸಿಲರ್ ಅಝೀಝ್ ಈ ಪ್ರಕರಣದಲ್ಲಿ ಶಾಮೀಲಾದ ಸಿಬ್ಬಂದಿ ಗಳನ್ನು ಸಭೆಗೆ ಹಾಜರುಪಡಿಸುವಂತೆ ಒತ್ತಾಯಿಸಿ ಪಟ್ಟು ಹಿಡಿದರು. ಈ ವೇಳೆ ಸದಸ್ಯರೊಬ್ಬರು ಇದಕ್ಕೊಂದು ತನಿಖಾ ಸಮಿತಿ ರಚಿಸುವಂತೆ ಸೂಚಿಸಿದಾಗ, ಸದಸ್ಯ ಮಹಮ್ಮದ್ ಮುಕಚೇರಿ ಅವರು, ತಪ್ಪು ಬಂದಾಗ ಆಡಳಿತ ಪಕ್ಷ ಸುಮ್ಮನಿರಲು ಸಾಧ್ಯವಿಲ್ಲ. ಸಿಬ್ಬಂದಿ ತನಿಖೆ ಸಭೆಯಲ್ಲಿ ಮಾಡುವುದಲ್ಲ. ಅದನ್ನು ಸಭೆ ಮುಗಿದ ಬಳಿಕ ಚರ್ಚೆ ಆಗಲಿ ಎಂದರು.
ಅಕ್ರಮ ಡೋರ್ ನಂಬರ್ ಪ್ರಕರಣ ದಲ್ಲಿ ಅಧ್ಯಕ್ಷರ ಕುಮ್ಮಕ್ಕು ಇದೆ ಎಂದು ಸದಸ್ಯ ರೊಬ್ಬರು ಆರೋಪಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಚಿತ್ರ ಕಲಾ ಅವರು, ಕುಮ್ಮಕ್ಕು ಇದೆ ಎಂದು ನನ್ನ ಮೇಲೆ ಗೂಬೆ ಕೂರಿಸುವುದು ಬೇಡ. ನಾನು ಅಧ್ಯಕ್ಷ ಆದಂದಿನಿಂದ ಹಿಡಿದು ಇಂದಿನವರೆಗೂ ಫೈಲ್ ಹಿಡಿದು ಕೊಂಡು ಹೋಗಿಲ್ಲ. ಅದರ ಹಿಂದೆ ಕೂಡಾ ಹೋಗಿಲ್ಲ ಎಂದರು.
ಇದೇ ವೇಳೆ ಕೌನ್ಸಿಲರ್ ದಿನಕರ್ ಉಳ್ಳಾಲ ಅಕ್ರಮ ಡೋರ್ ನಂಬರ್, ವರದಿಗೆ ವೈಟ್ನರ್ ಬಳಸಿ ದುರುಪಯೋಗ ಮಾಡುವುದು ನಡೆದಿದೆ. ಈ ವಿಚಾರ ಕೆ ಸಂಬಂಧಿಸಿ ಸಿಬ್ಬಂದಿ ಯನ್ನು ಕರೆಸಿ ತನಿಖೆ ಮಾಡಲು ಇದು ಪೊಲೀಸ್ ಠಾಣೆ ಅಲ್ಲ ಎಂದರು.
ಕಸ ವಿಲೇವಾರಿ ವಿಳಂಬ ಆಗುವ ಬಗ್ಗೆ ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿ ಆರೋಗ್ಯ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮುಹಮ್ಮದ್ ಮುಕಚೇರಿ ಮಾತನಾಡಿ, ಆರೋಪ, ಆಕ್ಷೇಪ, ಗೊಂದಲ ಸಾಮಾನ್ಯ. ಆದರೆ ಅರ್ಹರಿಗೆ ಮಧ್ಯವರ್ತಿಗಳ ಬಳಕೆ ಮಾಡದೇ ಡೋರ್ ನಂಬರ್, ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದರು.







