ಗರ್ಭಿಣಿಯಾಗಿದ್ದಾಗಲೇ ಮತ್ತೆ ಗರ್ಭ ಧರಿಸಿ ಅವಳಿ ಮಕ್ಕಳನ್ನು ಹೆತ್ತ ಅಮೆರಿಕದ ಮಹಿಳೆ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್, ಮೇ 31: ಅಮೆರಿಕದ ಟೆಕ್ಸಾಸ್ನ ಮಹಿಳೆಯೊಬ್ಬರು ಗರ್ಭಿಣಿಯಾಗಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿ ತದ್ರೂಪಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ವಿದ್ಯಮಾನ ವರದಿಯಾಗಿದೆ.
30 ವರ್ಷದ ಕಾರಾ ವಿನ್ಹೋಲ್ಡ್ ಎಂಬ ಮಹಿಳೆಗೆ ಅದಕ್ಕೂ ಮುಂಚೆ 3 ಬಾರಿ ಗರ್ಭಪಾತವಾಗಿತ್ತು. 4ನೇ ಬಾರಿ ಗರ್ಭಿಣಿಯಾಗಿದ್ದ ಕಾರಾಳ ಗರ್ಭದಲ್ಲಿ 1 ತಿಂಗಳ ಬಳಿಕ ಮತ್ತೊಂದು ಮಗು ಬೆಳೆಯುತ್ತಿರುವು ವೈದ್ಯರು ದೃಢಪಡಿಸಿದ್ದರು. ವೈದ್ಯಕೀಯ ಭಾಷೆಯಲ್ಲಿ ಈ ಪರಿಸ್ಥಿತಿಯನ್ನು ಸೂಪರ್ಫೆಟೇಷನ್ ಎಂದು ಹೆಸರಿಸಲಾಗಿದೆ. ಗರ್ಭಿಣಿಯಾಗದ ಕೆಲ ದಿನ ಅಥವಾ ವಾರದಲ್ಲಿ ಮತ್ತೆ ಗರ್ಭ ಧರಿಸುವ ಪ್ರಕ್ರಿಯೆ ಇದಾಗಿದೆ ಎಂದು ‘ಹೆಲ್ತ್ ಲೈನ್’ ಪತ್ರಿಕೆ ಹೇಳಿದೆ.
"ಮೊದಲ ಬಾರಿ ಪರೀಕ್ಷಿಸಿದಾಗ ಆತ(2ನೇ ಮಗು) ಅಲ್ಲಿರಲಿಲ್ಲ. ಈಗೇನಾಗಿದೆ ಎಂದು ವೈದ್ಯರನ್ನು ಪ್ರಶ್ನಿಸಿದೆ. ಅದಕ್ಕೆ ಅವರು ಬಹುಷಃ ನೀವು 2 ಬಾರಿ ಅಂಡೋತ್ಪತ್ತಿ ಮಾಡಿದ್ದೀರಿ. 2 ಅಂಡ(ತತ್ತಿ)ಗಳನ್ನು ಬಿಡುಗಡೆ ಮಾಡಿದ್ದು ಅವು 2 ವಿಭಿನ್ನ ಸಂದರ್ಭದಲ್ಲಿ ಅಂದರೆ 1 ವಾರದ ಬಳಿಕ ಫಲವತ್ತಾಗಿವೆ ಎಂದು ಉತ್ತರಿಸಿದಾಗ ಅಚ್ಚರಿಯಾಯಿತು. ಇದೊಂದು ಪವಾಡ ಎಂದು ನಾನು 100% ವಿಶ್ವಾಸದಲ್ಲಿದ್ದೇನೆ" ಎಂದು ಕಾರಾ ಪ್ರತಿಕ್ರಿಯಿಸಿದ್ದಾರೆ.
ಈ ದಂಪತಿಗೆ 2018ರಲ್ಲಿ ಪುತ್ರ ಜನಿಸಿದ್ದು ಬಳಿಕ ಕಾರಾಗೆ 3 ಬಾರಿ ಗರ್ಭಪಾತವಾಗಿತ್ತು. ತಮಗೆ ಮತ್ತೊಂದು ಮಗು ಬೇಕೆಂದು ಆಸೆಯಿತ್ತು. ಆದರೆ ಮೂರು ಬಾರಿಯ ನಿರಾಶೆಯಿಂದ ಆತಂಕವಾಗಿತ್ತು. ಆದರೂ ಆಶಾವಾದಿಯಾಗಿದ್ದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಗರ್ಭ ಧರಿಸಿದ್ದೆ. ಒಂದು ತಿಂಗಳ ಬಳಿಕ ವೈದ್ಯರಲ್ಲಿ ಪರೀಕ್ಷೆ ನಡೆಸಿದಾಗ ಮತ್ತೊಂದು ಭ್ರೂಣ ಬೆಳೆಯುತ್ತಿರುವುದು ಪತ್ತೆಯಾಗಿದೆ. ಇದೊಂದು ಪವಾಡ ಎಂದೇ ಭಾವಿಸುತ್ತೇನೆ. ಈಗ 6 ನಿಮಿಷದ ಅವಧಿಯಲ್ಲಿ 2 ಗಂಡು ಮಗು ಜನಿಸಿದ್ದು ಎರಡೂ ತದ್ರೂಪಿ ಅವಳಿ ಜವಳಿ ಮಕ್ಕಳು ಎಂದು ಕಾರಾ ಹೆಮ್ಮೆಯಿಂದ ಹೇಳಿರುವುದಾಗಿ ‘ದಿ ಮೆಟ್ರೊ’ ವರದಿ ಮಾಡಿದೆ.