ಭಾರತದಿಂದ ಮತ್ತೆ 500 ಮಿಲಿಯನ್ ಡಾಲರ್ ಸಾಲಪಡೆಯಲು ಶ್ರೀಲಂಕಾ ಪ್ರಯತ್ನ: ವರದಿ
ಕೊಲಂಬೊ, ಮೇ 31: ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರಿದಿರುವಂತೆಯೇ, ತೈಲ ಆಮದಿಗೆ ಭಾರತದಿಂದ ಮತ್ತೆ 500 ಮಿಲಿಯನ್ ಡಾಲರ್ ಸಾಲ ಪಡೆಯಲು ಶ್ರೀಲಂಕಾ ಪ್ರಯತ್ನಿಸುತ್ತಿದೆ ಎಂದು ‘ಡೈಲಿ ಮಿರರ್’ ವರದಿ ಮಾಡಿದೆ. ಕಳೆದ ವಾರ ಭಾರತಕ್ಕೆ ಶ್ರೀಲಂಕಾದ ಹೈಕಮಿಷನರ್ ಮಿಲಿಂದಾ ಮೊರಗೊಡ ಭಾರತದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಈ ಹಿಂದೆ ಭಾರತ ಒದಗಿಸಿದ 500 ಮಿಲಿಯನ್ ಡಾಲರ್ ಸಾಲಕ್ಕೆ ಹೆಚ್ಚುವರಿಯಾಗಿ ಈ ಸಾಲ ಒದಗಿಸುವಂತೆ ಶ್ರೀಲಂಕಾ ಕೋರಿಕೆ ಸಲ್ಲಿಸಿದೆ ಎಂದು ವರದಿ ಹೇಳಿದೆ. ದ್ವೀಪರಾಷ್ಟ್ರದಲ್ಲಿ ತೈಲದ ತೀವ್ರ ಕೊರತೆ ತಲೆದೋರಿದ್ದು ಮುಂದಿನ ಒಂದೆರಡು ದಿನದಲ್ಲಿ ತೈಲ ಆಮದಾಗದಿದ್ದರೆ ತೈಲ ದಾಸ್ತಾನು ಬರಿದಾಗಬಹುದು ಎಂದು ಮಾಧ್ಯಮಗಳ ವರದಿ ಹೇಳಿದೆ. ಜತೆಗೆ, ಆಹಾರ ವಸ್ತುಗಳು, ಔಷಧ, ಅಡುಗೆ ಅನಿಲ, ವಿದ್ಯುಚ್ಛಕ್ತಿ, ಹಾಲಿನ ಪುಡಿ ಇತ್ಯಾದಿ ದೈನಂದಿನ ಅಗತ್ಯದ ವಸ್ತುಗಳ ಕೊರತೆಯೂ ಹೆಚ್ಚಿದೆ.
ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಭಾರತ ಒದಗಿಸಿದ 1 ಬಿಲಿಯನ್ ಡಾಲರ್ ಸಾಲದ ನೆರವಿನಲ್ಲಿ 200 ಮಿಲಿಯನ್ ಡಾಲರ್ ಮೊತ್ತವನ್ನು ಇಂಧನ ಆಮದಿಗೆ ಶ್ರೀಲಂಕಾ ಬಳಸಿದೆ. ಇದುವರೆಗೆ ಭಾರತದಿಂದ ಲಭಿಸಿದ ಸುಮಾರು 700 ಮಿಲಿಯನ್ ಡಾಲರ್ ಮೊತ್ತವನ್ನು ಡೀಸೆಲ್ ಮತ್ತು ಪೆಟ್ರೋಲ್ ಆಮದಿಗಾಗಿ ಬಳಸಲಾಗಿದೆ ಎಂದು ಡೈಲಿ ಮಿರರ್ ವರದಿ ಹೇಳಿದೆ. ದೇಶಕ್ಕೆ ಎದುರಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಸಂದರ್ಭ ನೆರವಿನ ಹಸ್ತ ಒದಗಿಸಿದ ಭಾರತದ ಜತೆ ದ್ವಿಪಕ್ಷೀಯ ಸಂಬಂಧ ಹೆಚ್ಚಿಸಲು ಶ್ರೀಲಂಕಾ ಉತ್ಸುಕವಾಗಿದೆ ಎಂದು ಶ್ರೀಲಂಕಾ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಶುಕ್ರವಾರ ಹೇಳಿದ್ದರು.
ದೇಶದ ಆದಾಯ ಹೆಚ್ಚಿಸುವ ಕಾಯ್ದೆ ತಿದ್ದುಪಡಿ ಪ್ರಸ್ತಾವನೆಗೆ ಶ್ರೀಲಂಕಾ ಸಂಪುಟದ ಅನುಮೋದನೆ
ಒಳನಾಡಿನ ಆದಾಯ, ವ್ಯಾಟ್, ದೂರಸಂಪರ್ಕ ಶುಲ್ಕ, ಗೇಮ್ ಹಾಗೂ ಬೆಟ್ಟಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ದೇಶದ ಆದಾಯವನ್ನು ಹೆಚ್ಚಿಸುವ ಪ್ರಧಾನಿ ವಿಕ್ರಮಸಿಂಘೆ ಅವರ ಪ್ರಸ್ತಾವನೆಗೆ ಶ್ರೀಲಂಕಾದ ಸಚಿವ ಸಂಪುಟ ಅನುಮೋದಿಸಿದೆ ಎಂದು ವರದಿಯಾಗಿದೆ.
2019ರಲ್ಲಿ ಸರಕಾರ ವ್ಯಾಟ್(ಮೌಲ್ಯವರ್ಧಿತ ತೆರಿಗೆ), ವೈಯಕ್ತಿಕ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ಆದಾಯ ತೆರಿಗೆಯ ದರಗಳನ್ನು ಇಳಿಸಿತ್ತು ಹಾಗೂ ವ್ಯಾಟ್ ಮತ್ತು ಆದಾಯ ತೆರಿಗೆಯ ಮೂಲದರವನ್ನು ಕಡಿಮೆಗೊಳಿಸಿತ್ತು. ಇದು ಸರಕಾರದ ಆದಾಯದಲ್ಲಿ ಭಾರೀ ಕುಸಿತಕ್ಕೆ ಕಾರಣವಾಗಿತ್ತು ಎಂದು ಸರಕಾರದ ಹೇಳಿಕೆ ತಿಳಿಸಿದೆ. ಈಗ ದೇಶಕ್ಕೆ ಎದುರಾಗಿರುವ ಆರ್ಥಿಕ ವಿಪತ್ತಿನ ಸಂಕಟದ ಸಂದರ್ಭ ಸರಕಾರದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ದೇಶದ ವಿತ್ತಸಚಿವರೂ ಆಗಿರುವ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಪ್ರಸ್ತಾವನೆ ಸಲ್ಲಿಸಿದ್ದರು.
1948ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕದ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ, ಸಾಲದ ನೆರವಿಗಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ಯ ಮೊರೆ ಹೋಗಿದೆ. ವಾಷಿಂಗ್ಟನ್‌ನಲ್ಲಿರುವ ಐಎಂಎಫ್ ಕೇಂದ್ರ ಕಚೇರಿಯಲ್ಲಿ ಎಪ್ರಿಲ್‌ನಲ್ಲಿ ಎರಡೂ ಕಡೆಯವರ ಮಧ್ಯೆ ಪ್ರಥಮ ಸುತ್ತಿನ ಮಾತುಕತೆ ನಡೆದಿದೆ. ತಳಮಟ್ಟಕ್ಕೆ ಕುಸಿದಿರುವ ವಿದೇಶಿ ವಿನಿಮಯ ಮೀಸಲು ನಿಧಿಗೆ ಪುನಶ್ಚೇತನ ನೀಡಲು ಆರ್ಎಫ್ಐ (ಕ್ಷಿಪ್ರ ಆರ್ಥಿಕ ನೆರವು) ಮತ್ತು ಇಎಫ್ಎಫ್(ವಿಸ್ತತ ನಿಧಿ ಸೌಲಭ್ಯ) ವ್ಯವಸ್ಥೆ ಒದಗಿಸುವಂತೆ ಶ್ರೀಲಂಕಾ ಒತ್ತಾಯಿಸಿದೆ. ಸುಮಾರು 300ರಿಂದ 600 ಮಿಲಿಯನ್ ಡಾಲರ್ನಷ್ಟು ಆರ್ಥಿಕ ನೆರವು ಒದಗಿಸುವ ಭರವಸೆಯನ್ನು ಐಎಂಎಫ್ ನೀಡಿದೆ.