ನೇಪಾಳ ವಿಮಾನ ಅಪಘಾತ ಪ್ರಕರಣ: ಬ್ಲ್ಯಾಕ್ ಬಾಕ್ಸ್ ಪತ್ತೆ
PHOTO CREDIT: AP
ಕಠ್ಮಂಡು, ಮೇ 31: ರವಿವಾರ ಮುಸ್ತಾಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ನೇಪಾಳದ ವಿಮಾನದ ಬ್ಲ್ಯಾಕ್ಬಾಕ್ಸ್ ಪತ್ತೆಯಾಗಿದೆ. ದುರಂತದಲ್ಲಿ ಮೃತಪಟ್ಟವರಲ್ಲಿ 12 ಮಂದಿಯ ಮೃತದೇಹಗಳನ್ನು ಕಠ್ಮಂಡುವಿಗೆ ಕೊಂಡೊಯ್ಯಲು ಸೇನೆ ಸಿದ್ಧತೆ ನಡೆಸುತ್ತಿದೆ ಎಂದು ನೇಪಾಳದ ಅಧಿಕಾರಿಗಳು ಹೇಳಿದ್ದಾರೆ.
ಅಪಘಾತದ ಸ್ಥಳದಿಂದ ಮಂಗಳವಾರ 2 ಮೃತದೇಹಗಳನ್ನು ಪತ್ತೆಹಚ್ಚಿ ಖಬಂಗ್-ಮುಸ್ತಾಂಗ್ ನ ಮೂಲಕೇಂದ್ರಕ್ಕೆ ತರಲಾಗಿದೆ. 10 ಮೃತದೇಹಗಳನ್ನು ಈಗಾಗಲೇ ಮೂಲಕೇಂದ್ರಕ್ಕೆ ತಂದಿದ್ದು, ಹವಾಮಾನ ಪರಿಸ್ಥಿತಿ ಉತ್ತಮವಾಗಿದ್ದರೆ ಈ ಮೃತದೇಹಗಳನ್ನು ಪೊಖರಾದ ಮೂಲಕ ಕಠ್ಮಂಡುವಿಗೆ ರವಾನಿಸಲಾಗುವುದು. ಶೋಧ ಮತ್ತು ರಕ್ಷಣೆ ಕಾರ್ಯಾಚರಣೆ ಇವತ್ತೇ ಅಂತ್ಯಗೊಳ್ಳುವ ನಿರೀಕ್ಷೆಯಿದೆ ಎಂದು ನೇಪಾಳ ಸೇನೆಯ ವಕ್ತಾರರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಕೆಟ್ಟ ಹವಾಮಾನ ಪರಿಸ್ಥಿತಿಯಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೂ ಎಂಐ-17 ಹೆಲಿಕಾಪ್ಟರ್ಗಳು ಹಾಗೂ 60ರಷ್ಟು ರಕ್ಷಣಾ ಸಿಬಂದಿಯೊಂದಿಗೆ ಕಾರ್ಯಾಚರಣೆ ಮುಂದುವರಿದಿದೆ. ಪತ್ತೆಯಾದ ಮೃತದೇಹಗಳನ್ನು ಸಮೀಪದ ಮೂಲನೆಲೆಗೆ ಕೊಂಡೊಯ್ಯಲು 3 ಹೆಲಿಕಾಪ್ಟರ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನನಿಲ್ದಾಣದ ವಕ್ತಾರ ತೇಕ್ನಾಥ್ ಸಿತುವಾಲ ಹೇಳಿದ್ದಾರೆ.