UPSC ಪರೀಕ್ಷೆ : ಕಾರ್ಕಳದ ಮೊಹಮ್ಮದ್ ಶೌಕತ್ ಅಝೀಮ್‌ಗೆ 545ನೆ ರ‍್ಯಾಂಕ್
ಡ್ರೈವರ್ ಪುತ್ರನ ಅಮೋಘ ಸಾಧನೆ

ಕಾರ್ಕಳ : ಕಾರ್ಕಳ ತಾಲೂಕು ಕಾರ್ಕಳ ಕಸಬಾ ಗ್ರಾಮದ ಜರಿಗುಡ್ಡೆ ನಿವಾಸಿ ಡ್ರೈವರ್ ವೃತ್ತಿಯ ಶೇಖ್ ಅಬ್ದುಲ್ಲಾ ಹಾಗೂ ಮೈಮೂನ ದಂಪತಿಯ ಇಬ್ಬರು ಮಕ್ಕಳಲ್ಲಿ ಹಿರಿಯ ಪುತ್ರ ಮೊಹಮ್ಮದ್ ಶೌಕತ್ ಅಝೀಮ್ ಯುಪಿಎಸ್ಸಿ ಪರೀಕ್ಷೆಯಲ್ಲಿ 545ನೆ ರ‍್ಯಾಂಕ್ ಗಳಿಸಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಜರಿಗುಡ್ಡೆ ಸರಕಾರಿ ಉರ್ದು ಪ್ರಾಥಮಿಕ ಶಾಲೆ ಹಾಗೂ ಕಾರ್ಕಳ ಎಸ್.ವಿ.ಟಿ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಕಾರ್ಕಳ ಶ್ರೀ ಭುವನೇಂದ್ರ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು, ಕಾರ್ಕಳ ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದ ಅವರು ಮಿಜಾರು ಮೈಟ್ ವಿದ್ಯಾ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ.
ನಂತರ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಈ ವೇಳೆ ಯುಪಿಎಸ್ಸಿ ತಯಾರಿಗಾಗಿ ಕರ್ನಾಟಕ ಸರಕಾರದ ವತಿಯಿಂದ ದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದರು. ತಮ್ಮ 7ನೆ ಪ್ರಯತ್ನದಲ್ಲಿ 545ನೆ ರ‍್ಯಾಂಕ್ ಪಡೆದಿದ್ದಾರೆ. ಇನ್ನೂ ಉತ್ತಮ ರ‍್ಯಾಂಕ್ ಪಡೆಯಲು ಮುಂದಿನ ಪರೀಕ್ಷೆಯನ್ನು ಎದುರಿಸುವುದಾಗಿ ಮೊಹಮ್ಮದ್ ಶೌಕತ್ ಅಝೀಮ್ "ವಾರ್ತಾಭಾರತಿ"ಗೆ ತಿಳಿಸಿದ್ದಾರೆ.





