ಡಬ್ಲುಎಚ್ಒನಿಂದ ಗೌರವ ಪಡೆದರೂ ಬದುಕಿಗಾಗಿ ಹೋರಾಡುತ್ತಿರುವ ಆಶಾ ಕಾರ್ಯಕರ್ತೆಯರು

ಹೊಸದಿಲ್ಲಿ, ಮೇ 31: ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಿಸುವಲ್ಲಿ ಕಠಿಣ ಶ್ರಮ ಪರಿಗಣಿಸಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಕಳೆದ ವಾರ ಗೌರವಕ್ಕೆ ಒಳಗಾದ ಆಶಾ ಕಾರ್ಯಕರ್ತೆಯರು ತಮ್ಮ ಬದುಕಿಗಾಗಿ ಈಗಲೂ ಹೋರಾಡುತ್ತಿರುವುದು ಆಘಾತಕಾರಿ ವಿಚಾರ.
ಭಾರತದ ಉದ್ದಗಲ ಔಷಧ, ಲಸಿಕೆ, ಪ್ರಥಮ ಚಿಕಿತ್ಸೆ, ಆರೋಗ್ಯ ಸಲಹೆ ಹಾಗೂ ಇತರ ಹಲವು ಸೇವೆಗಳನ್ನು ನೀಡುತ್ತಿರುವ ಮಾನ್ಯತೆ ಪಡೆದ 10 ಲಕ್ಷ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ ಕಾರ್ಯಕರ್ತೆಯರು)ರನ್ನು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವುದು ಅವರಿಗೆ ಜಾಗತಿಕ ಮಟ್ಟದಲ್ಲಿ ಅಗತ್ಯವಾಗಿತ್ತು.
ಆದರೆ, ಕಡಿಮೆ ಪಾವತಿ, ಯಾವುದೇ ಸೌಲಭ್ಯ ಇಲ್ಲದಿರುವುದು ಅನಿಯಮಿತ ವೇಳಾಪಟ್ಟಿಯ ವಿರುದ್ಧ ಅವರ ಹೋರಾಟ ಮುಂದುವರಿದಿದೆ. ಅಲ್ಲದೆ, ಅವರು ಮಹಿಳೆಯರಾಗಿರುವುದರಿಂದ ಮನೆ ಹಾಗೂ ಉದ್ಯೋಗದ ನಡುವೆ ಸಮತೋಲನವನ್ನು ಕೂಡ ಕಾಯ್ದುಕೊಳ್ಳಬೇಕಾಗಿದೆ.
ಉತ್ತರಪ್ರದೇಶದ ಬಸ್ತಿಯ ಆಶಾ ಕಾರ್ಯಕರ್ತೆ 42ರ ಹರೆಯದ ಸೈಲೇಂದ್ರಿ ಪ್ರತಿದಿನ ಮುಂಜಾನೆ 3 ಗಂಟೆಗೆ ಏಳುತ್ತಾರೆ. ತನ್ನ ಮನೆಯ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಅನಂತರ ಮನೆಮನೆಗೆ ತೆರಳಲು ತನ್ನ ಸಹೋದ್ಯೋಗಿಗಳೊಂದಿಗೆ ಸೇರಿಕೊಳ್ಳುತ್ತಾರೆ. ತನ್ನ ಸಂಸಾರವನ್ನು ನಿರ್ವಹಿಸುವುದು ಹೇಗೆ ಎಂಬುದು ಅವರ ಮುಖ್ಯ ಚಿಂತೆಯಾಗಿದೆ.
"ಸರಕಾರ ನಮಗೆ ಸ್ಥಿರ ಆದಾಯ ನೀಡಬೇಕು. ತುಂಬಾ ಕೆಲಸ ಮಾಡುತ್ತೇವೆ. ಆದರೆ, ನಾವು ಮಾಡಿದ ಕೆಲಸವನ್ನು ಅಧಿಕಾರಿಗಳು ಗುರುತಿಸುವುದಿಲ್ಲ. ನಾವು ಜನರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇವೆ. ಆದರೆ, ನಮಗೆ ಕೇವಲ ಪ್ರಶಂಶೆ ಮಾತ್ರ ಸಿಗುತ್ತದೆ" ಎಂದು ಅವರು ಹೇಳಿದ್ದಾರೆ.
ನಾವು ತಿಂಗಳಿಗೆ ಹೆಚ್ಚೆಂದರೆ 10 ಸಾವಿರ ರೂಪಾಯಿ ಪಡೆಯುತ್ತೇವೆ. ಪ್ರತಿದಿನ ಬೆಲೆಗಳು ಏರುತ್ತಿರುವ ಸಂದರ್ಭದಲ್ಲಿ ಈ ಹಣದಿಂದ ನಮ್ಮ ಕುಟುಂಬಕ್ಕೆ ನೆರವು ನೀಡುವುದು ಹೇಗೆ? ನಾವು ನಮ್ಮ ಕುಟುಂಬಕ್ಕಿಂತ ಕರ್ತವ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಮೂಲಕ ವೈಯುಕ್ತಿಕ ತ್ಯಾಗ ಮಾಡುತ್ತಿದ್ದೇವೆ ಎಂದು ಕಳೆದ 16 ವರ್ಷಗಳಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸೈಲೇಂದ್ರಿ ಅವರು ಹೇಳಿದ್ದಾರೆ.
ಸೈಲೇಂದ್ರಿ ಅವರ ಈ ಅಭಿಪ್ರಾಯಕ್ಕೆ ಬಿಹಾರದ ಬಾಗಲ್ಪುರ ಜಿಲ್ಲೆಯ ಸಬೌರ್ ಬ್ಲಾಕ್ನ ಆಶಾ ಕಾರ್ಯಕರ್ತೆ ಸುನಿತಾ ಸಿನ್ಹಾ ಸಹಮತ ವ್ಯಕ್ತಪಡಿಸಿದ್ದಾರೆ. ಅವರು, ನಾವು ರೋಗಿಗಳನ್ನು ಕೂಡ ಆಸ್ಪತ್ರೆಗೆ ಕೊಂಡೊಯ್ಯುವ ದಿನ ಬರಲಿದೆ ಎಂದಿದ್ದಾರೆ. ಯಾವುದೇ ಭತ್ಯೆ ಇಲ್ಲ. ಆದರೂ ನಾವು ಸ್ವಂತವಾಗಿ ಎಲ್ಲವನ್ನೂ ನಿರ್ವಹಿಸಬೇಕು. ನಾವು ತುಂಬಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತೇವೆ. ಇಡೀ ದಿನ ನಡೆಯುತ್ತಾ ಐದು ನಿಮಿಷ ಕುಳಿತುಕೊಳ್ಳದ ದಿನ ಇದೆ. ಆದರೆ, ಇದನ್ನೆಲ್ಲ ಯಾರೂ ಗಮನಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
"ನನಗೆ ಒಂದು ಘಟನೆ ನೆನಪಿಗೆ ಬರುತ್ತದೆ. ನಮ್ಮಲ್ಲಿ ಮಾಸ್ಕ್ ಖಾಲಿಯಾಗಿತ್ತು. ಆಗ ನಾವು ಬಟ್ಟೆಯನ್ನು ಸ್ಯಾನಿಟೈಸ್ಗೊಳಿಸಿದೆವು ಹಾಗೂ ಮಾಸ್ಕ್ ಮಾಡಿದೆವು. ಈಗ ಕೂಡ ನಾವು ಲಸಿಕೆ ತೆಗೆದುಕೊಳ್ಳುವಂತೆ ಜನರನ್ನು ಉತ್ತೇಜಿಸುತ್ತಿದ್ದೇವೆ. ಲಸಿಕೆ ಅಭಿಯಾನ ಆರಂಭವಾದ ದಿನದಿಂದ ಲಸಿಕೆಯ ಕುರಿತು ನಾವು ಅರಿವು ಮೂಡಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಲಕ್ಷಾಂತರ ಗ್ರಾಮ ನಿವಾಸಿಗಳು ಹಾಗೂ ಆರೋಗ್ಯ ಸೇವೆ ವ್ಯವಸ್ಥೆಯನ್ನು ಸಂಪರ್ಕಿಸುವ ಮೊದಲ ಹಾಗೂ ಕೆಲವೊಮ್ಮೆ ಏಕೈಕ ಕೊಂಡಿ ಆಶಾ ಕಾರ್ಯಕರ್ತೆಯರು. ಅವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ (ಎನ್ಎಚ್ಎಂ)ದ ಅಡಿಯಲ್ಲಿ ಗುರಿ ಆಧಾರಿತ ಉತ್ತೇಜಕದ ಮೂಲಕ ಹಣ ಗಳಿಸುತ್ತಾರೆ. ಇದಕ್ಕೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ 60:40 ಅನುಪಾತದಲ್ಲಿ ನೀಡುವ ನಿಧಿ ನೀಡುತ್ತದೆ
"ನಾವು 10 ಸಾವಿರಕ್ಕಿಂತ ಹೆಚ್ಚು ಗಳಿಸುವುದಿಲ್ಲ" ಎಂದು ಆಶಾ ಕಾರ್ಯಕರ್ತೆಯರು ಹೇಳಿದ್ದಾರೆ. ನಿಯಮಿತ ಮುಂಚೂಣಿ ಕಾರ್ಯಕರ್ತರು ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ನಿಯೋಜಿತರಾದ ಆಶಾ ಕಾರ್ಯಕರ್ತರ ನಡುವೆ ವೇತನ ಶ್ರೇಣಿಯಲ್ಲಿ ಪ್ರಮುಖ ವ್ಯತ್ಯಾಸ ಇದೆ ಎಂದು ಪಾಪ್ಯುಲೇಶನ್ ಪೌಂಡೇಶನ್ ಆಫ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕರಾದ ಪೂನಂ ಮುಟ್ರೇಜ ಅವರು ತಿಳಿಸಿದ್ದಾರೆ.







