ಫ್ಲೋರಿಡಾದಲ್ಲಿ ಪ್ಯಾರಾಗ್ಲೈಡಿಂಗ್ ದುರಂತ: ಆಂಧ್ರದ ಮಹಿಳೆ ಮೃತ್ಯು
ಸಾಂದರ್ಭಿಕ ಚಿತ್ರ
ಗುಂಟೂರು: ಆಂಧ್ರಪ್ರದೇಶದ ಬಾಪತಲದ ಮಹಿಳೆ ಮಂಗಳವಾರ ಫ್ಲೋರಿಡಾದಲ್ಲಿ ನಡೆದ ಪ್ಯಾರಾಗ್ಲೈಡಿಂಗ್ ದುರಂತದಲ್ಲಿ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಸಂತಮಂಗುಲೂರು ತಾಲೂಕಿನ ಮಂಕೆನಿವರಿಪಾಲೆಮ್ನ ಅಲಪರ್ತಿ ಸುಪ್ರಜಾ (34) ಎಂದು ಗುರುತಿಸಲಾಗಿದೆ. ಇವರು ಪತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಈ ಕುಟುಂಬ ಇತ್ತೀಚೆಗೆ ಚಿಕಾಗೊದಿಂದ ಫ್ಲೋರಿಡಾಗೆ ಸ್ಥಳಾಂತರಗೊಂಡಿತ್ತು. ಸುಪ್ರಜಾ ಹಾಗೂ ಮಗ ಅಕ್ಷಿತ್, ಫ್ಲೋರಿಡಾ ಬೀಚ್ನಲ್ಲಿ ಪ್ಯಾರಾಗ್ಲೈಡರ್ ನಲ್ಲಿ ಇದ್ದರು ಎನ್ನಲಾಗಿದೆ. ಆಕಸ್ಮಿಕವಾಗಿ ಈ ಪ್ಯಾರಾಗ್ಲೈಡರ್ ಸೇತುವೆಗೆ ಢಿಕ್ಕಿ ಹೊಡೆಯಿತು. ಸುಪ್ರಜಾ ಸ್ಥಳದಲ್ಲೇ ಮೃತಪಟ್ಟರೆ, ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಸುಪ್ರಜಾ ಅವರ ತಂದೆ ಟಿ.ಶ್ರೀನಿವಾಸ ರಾವ್ ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯರಾಗಿದ್ದರು.
ಈ ಆಘಾತಕಾರಿ ಸುದ್ದಿ ಕುಟುಂಬಕ್ಕೆ ತಲುಪುತ್ತಿದ್ದಂತೆ, ಮಂಕೆನಿವರಿಪಾಲೆಮ್ ನಲ್ಲಿ ಶೋಕ ಮಡುಗಟ್ಟಿದೆ. ಸುಪ್ರಜಾರ ಬಾವಂದಿರ ಗ್ರಾಮ ಚಿಂತಪುಡಿಯಲ್ಲಿ ವಾರಾಂತ್ಯಕ್ಕೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಹೇಳಿದ್ದಾರೆ.