ಪ್ರಧಾನಿ ಮೋದಿ ಆಡಳಿತಕ್ಕೆ 8 ವರ್ಷ; ಜೂ.1ರಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಕಾರ್ಯಕ್ರಮ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ 8 ವರ್ಷ ತುಂಬಿದ ಹಿನ್ನೆಲೆಯಲ್ಲಿ 'ಸೇವೆ ಸುಶಾಸನ ಮತ್ತು ಬಡವರ ಕಲ್ಯಾಣ' ಎಂಬ ಕಾರ್ಯಕ್ರಮದ ಭಾಗವಾಗಿ ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಜೂ.1ರಿಂದ 15ರ ವರೆಗೆ ಸರಣಿ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಜೂ.5ರಂದು ಬೆಳಗ್ಗೆ 11ಕ್ಕೆ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ರೈತರ ಸಮಾವೇಶ, ಮಧ್ಯಾಹ್ನ ಪರಿಶಿಷ್ಟ ಪಂಗಡ ಮೋರ್ಚಾದಿಂದ ಅವರ ಸಮುದಾಯಕ್ಕೆ ನೀಡಿದ ಸೌಲಭ್ಯಗಳ ಕುರಿತ ಸಮಾವೇಶ ನಡೆಯಲಿದೆ. ಜೂ. 9ರಂದು ಮಹಿಳಾ ಸಮಾವೇಶ, ಜೂ. 14ರಂದು ಯುವ ಮೋರ್ಚಾದಿಂದ ವಿಕಾಸ ತೀರ್ಥ ಬೈಕ್ ಜಾಥಾ ನಡೆಯಲಿದೆ ಎಂದರು.
ಹೀಗಾಗಿ ಸುಮಾರು 15ದಿನಗಳ ಕಾಲ ಸಮಾವೇಶ, ಸಭೆಗಳು, ಜನಸಂಪರ್ಕ, ಸರಕಾರದ ಯೋಜನೆಗಳ ಪ್ರಚಾರ, ಪಡಿತರ ವಿತರಣೆಯ ಅಂಗಡಿಗಳ ಮುಂದೆ ಬ್ಯಾನರ್ ಅಳವಡಿಸಿ ಪ್ರಚಾರ, ಸಾಧಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷ ಚಿದಾನಂದ ರೈ ಕಕ್ಯ, ಕಾರ್ಯದರ್ಶಿಗಳಾದ ಗಣೇಶ್ ರೈ ಮಾಣಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಉಪಸ್ಥಿತರಿದ್ದರು.