ಪಠ್ಯದಿಂದ ಕತೆ, ಕವನ ವಾಪಾಸ್ಸು ಪಡೆಯಲು ಪತ್ರ ಬರೆದಿರುವವರ ಜೊತೆಯೂ ಮಾತುಕತೆ: ಸಿಎಂ ಬೊಮ್ಮಾಯಿ

ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ನಿನ್ನೆ ಕೆಲವು ಸ್ವಾಮೀಜಿ ಹಾಗೂ ಇತರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಪತ್ರಗಳನ್ನು ಬರೆದಿದ್ದಾರೆ. ಈ ಎಲ್ಲ ವಿಚಾರವಾಗಿ ಸಮಗ್ರವಾದ ವರದಿ ಮತ್ತು ವಾಸ್ತವಾಂಶ ಸಲ್ಲಿಸುವಂತೆ ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ. ಅದರಂತೆ ಸಚಿವರು ಜೂ.2ಕ್ಕೆ ಈ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲ ಖಾಸಗಿ ಹೊಟೇಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವರ್ಗದಿಂದ ಪಠ್ಯಪುಸ್ತಕದ ಮೂಲದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಆದುದರಿಂದ ಯಾವುದೇ ಆತಂಕ ಒಳಗಾಗುವ ಅವಶ್ಯಕತೆ ಇಲ್ಲ ಎಂಬ ಸಮಜಾಯಿಸಿ ಬರುತ್ತಿದೆ. ಅವು ಎಲ್ಲವನ್ನು ಪರಿಗಣಿಸಿ ವಾಸ್ತವಾಂಶದ ಬಗ್ಗೆ ವರದಿ ಪಡೆದು ನಾವು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದರು.
ಪಠ್ಯದಿಂದ ತಮ್ಮ ಕತೆ, ಕವನ ವಾಪಾಸ್ಸು ಪಡೆಯುವಂತೆ ಪತ್ರ ಬರೆದಿರುವವರನ್ನು ಕೂಡ ಪರಿಗಣಿಸುತ್ತೇವೆ. ನಮ್ಮ ನಿರ್ಧಾರದ ಆಧಾರದ ಮೇಲೆ ಅವರೆಲ್ಲ ಮುಂದಿನ ತೀರ್ಮಾನ ಮಾಡುತ್ತಾರೆ. ಯಾರು ನಮ್ಮ ಪಾಠವನ್ನು ವಾಪಾಸ್ಸು ಪಡೆಯಲು ನಿರ್ಧರಿಸಿದ್ದಾರೆಯೇ ಅವರ ಜೊತೆ ಕೂಡ ಮಾತುಕತೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಎಸಿಬಿ ಬಲವರ್ಧನೆ ಆಗಿ, ಒಂದು ವ್ಯವಸ್ಥೆ ಬಂದಿದೆ. ಲೋಕಾಯುಕ್ತ ಇದ್ದರೂ ಕೂಡ ತಾಂತ್ರಿಕವಾಗಿ ಅವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಪ್ರಕರಣ ದಾಖಲಿಸಲು ಆಗುವುದಿಲ್ಲ. ಎಸಿಬಿ ಪ್ರಕರಣ ದಾಖಲಿಸಲು ಅವಕಾಶ ಇದೆ. ಮುಂದೆ ಈ ಬಗ್ಗೆ ಪರಿಶೀಸುವ ನಿಟ್ಟಿನಲ್ಲಿ ಎಲ್ಲ ವಿವರ ಪಡೆದುಕೊಳ್ಳಲಾಗುವುದು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತಿದ್ದು, ಕಾದು ನೋಡಬೇಕು ಎಂದರು.
ಕರಾವಳಿಯಲ್ಲಿನ ಲವ್ ಜಿಹಾದ್ ಕುರಿತ ಪ್ರಶ್ನೆಗೆ ಉತ್ತರಿಸಿದ, ಲವ್ ಜಿಹಾದ್ ಮೊದಲಿನಿಂದಲೂ ಇದೆ. ಈಗ ಸೃಷ್ಠಿಯಾಗಿರುವುದು ಅಲ್ಲ. ಅದಕ್ಕಾಗಿ ಕಾನೂನು ಮಾಡಿದ್ದೇವೆ. ಆ ಕಾನೂನಿನಡಿ ಎಲ್ಲವನ್ನು ಪರಿಗಣಿಸುತ್ತೇವೆ. ಯಾರಿಗೂ ಕಾನೂನು ಉಲ್ಲಂಘನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕ ರಘುಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಬಾಕಿ ವೇತನ ಪಾವತಿಯ ಭರವಸೆ
ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ಐದು ತಿಂಗಳ ಬಾಕಿ ವೇತನ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಆಸ್ಪತ್ರೆಗೆ ಸಂಬಂಧಿಸಿ ಇದ್ದ ಗೊಂದಲವನ್ನು ನಿವಾವರಣೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಆಗದಂತೆ ಸರಿಯಾದ ವ್ಯವಸ್ಥೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
