ಭೋಪಾಲ್ ಜೈಲಿನಲ್ಲಿ ಕೈದಿಗಳಿಗೆ ಅರ್ಚಕ ತರಬೇತಿ ಕೋರ್ಸ್ ನಡೆಸಿದ ಆರೆಸ್ಸೆಸ್ ಬೆಂಬಲಿತ ಸಂಸ್ಥೆ: ವರದಿ

Photo: thewire.in/Kashif Kakvi
ಭೋಪಾಲ್: ಭೋಪಾಲ್ ಕೇಂದ್ರ ಕಾರಾಗೃಹದ 50 ಕೈದಿಗಳಿಗೆ ಇತ್ತೀಚೆಗೆ ಆರೆಸ್ಸೆಸ್ ಬೆಂಬಲಿತ ಗಾಯತ್ರಿ ಶಕ್ತಿ ಪೀಠ ಸಂಘಟನೆಯ ವತಿಯಿಂದ ಒಂದು ತಿಂಗಳ ಅರ್ಚಕ ತರಬೇತಿ ಕೋರ್ಸ್ ನಡೆಸಲಾಗಿದೆ. ಗಾಯತ್ರಿ ಶಕ್ತಿ ಪೀಠವು ಗಾಯತ್ರಿ ಪರಿವಾರದ ಅಂಗಸಂಸ್ಥೆಯಾಗಿದೆ. ಅರ್ಚಕ ತರಬೇತಿ ಹೊಂದಿದ ಕೈದಿಗಳು ಗಂಭೀರ ಅಪರಾಧಗಳಾದ ಅತ್ಯಾಚಾರ, ಕೊಲೆ, ಡಕಾಯಿತಿ, ಅಪಹರಣ ಮುಂತಾದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರಾಗಿದ್ದಾರೆ ಎಂದು Thewire.in ವರದಿ ಮಾಡಿದೆ.
ʼಯುಗ್ ಪುರೋಹಿತ್ʼ ಎಂಬ ಹೆಸರಿನ ಈ ಅರ್ಚಕ ತರಬೇತಿ ಕಾರ್ಯಕ್ರಮ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು. ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ 150 ಕೈದಿಗಳ ಪೈಕಿ ಜೈಲು ಆಡಳಿತ ಮತ್ತು ಗಾಯತ್ರಿ ಶಕ್ತಿ ಪೀಠ 50 ಮಂದಿಯನ್ನು ತರಬೇತಿಗೆ ಆಯ್ಕೆ ಮಾಡಿತ್ತು. ಸದ್ಯದಲ್ಲಿಯೇ ಎರಡನೇ ಬ್ಯಾಚ್ ತರಬೇತಿ ಕಾರ್ಯಕ್ರಮ ನಡೆಯುವ ನಿರೀಕ್ಷೆಯಿದೆ.
ತರಬೇತಿಯ ಅಂಗವಾಗಿ ಕೈದಿಗಳಿಗೆ ಎಂಟರಿಂದ 10 ಧಾರ್ಮಿಕ ಪುಸ್ತಕಗಳನ್ನು ನೀಡಲಾಗಿತ್ತು ಹಾಗೂ ಎಂಟು ಶಿಕ್ಷಕರು ಅವರಿಗೆ ಕರ್ಮಕಾಂಡ್, ಸಂಗೀತ್ ಮತ್ತು ಬೌದ್ಧಿಕ್ ಶಿಕ್ಷಣ ನೀಡಿದ್ದರು.
ಕರ್ಮಕಾಂಡ್ನಲ್ಲಿ ವಿವಿಧ ಕಾರ್ಯಕ್ರಮಗಳ ಪೂಜಾ ವಿಧಿವಿಧಾನಗಳನ್ನು ಕಲಿಸಲಾಯಿತಾದರೆ, ಸಂಗೀತ್ ತರಬೇತಿಯಲ್ಲಿ ಸಾಂಪ್ರದಾಯಿಕ ಸಂಗೀತ ಉಪಕರಣಗಳ ಬಳಕೆ ಮತ್ತು ಭಜನೆಗಳನ್ನು ಕಲಿಸಲಾಯಿತು. ಬೌದ್ಧಿಕ್ ತರಬೇತಿಯಲ್ಲಿ ಜೀವನ, ಹಿಂದು ಧರ್ಮ, ಧರ್ಮದ ಸಹಾಯದಿಂದ ಸಂತೋಷದ ಜೀವನ ಮುಂತಾದ ವಿಚಾರಗಳ ಬಗ್ಗೆ ಕಲಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ..
ಈ ತರಬೇತಿ ಪಡೆದ ಕೈದಿಗಳು ಬಿಡುಗಡೆಗೊಂಡ ನಂತರ ಉತ್ತಮ ಪ್ರಜೆಗಳಾಗಿ ಅರ್ಚಕ ವೃತ್ತಿಯನ್ನು ನಡೆಸಬಹುದು ಎಂದು ತರಬೇತಿ ನೀಡಿದ ಗಾಯತ್ರಿ ಶಕ್ತಿ ಪೀಠದ ಸದಸ್ಯ ಸದಾನಂದ್ ಅಮ್ರೇಕರ್ ಹೇಳಿದ್ದಾರೆ.