ಮಂಗಳೂರು : ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಗಳಲ್ಲಿ ಪರಿಶುದ್ಧ ಕುಡಿಯುವ ನೀರು ವ್ಯವಸ್ಥೆ ಕೊಡುಗೆ

ಮಂಗಳೂರು: ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್, ಮಂಗಳೂರು ಇವರು ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಆರು ಸ್ಮಾರ್ಟ್ ಸಿಟಿ ಬಸ್ ನಿಲ್ದಾಣಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ರೂ. 1.87 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿದೆ.
ನಗರದ ಬಂಟ್ಸ್ ಹಾಸ್ಟೆಲ್ ಬಸ್ ನಿಲ್ದಾಣದಲ್ಲಿ (ಹೋಟೆಲ್ ಅಭಿಮಾನ್ ರೆಸಿಡೆನ್ಸಿ ಎದುರು) ಸ್ಥಾಪಿಸಲಾದ ಮೊದಲ ವಾಟರ್ ಪ್ಯೂರಿಫೈಯರ್ ಘಟಕವನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಮೇ 28 ಶನಿವಾರ ಮಧ್ಯಾಹ್ನ 3 ಗಂಟೆಗೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಸ್ಥಳೀಯ ವಾರ್ಡ್ ಕಾರ್ಪೊರೇಟರ್ ಕದ್ರಿ ಮನೋಹರ ಶೆಟ್ಟಿ ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ ಉದ್ಘಾಟಿಸಿದರು.
ಪ್ರಮುಖ ಸಾರ್ವಜನಿಕ ಅಗತ್ಯವನ್ನು ಪರಿಹರಿಸಲು ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ ಕೈಗೊಂಡ ಉಪಕ್ರಮವನ್ನು ಶಾಸಕ ವೇದವ್ಯಾಸ್ ಕಾಮತ್ ಶ್ಲಾಘಿಸಿದರು. "ಕುಡಿಯುವ ನೀರು ಸೌಲಭ್ಯ ಮತ್ತು ನಗರ ಸುಂದರೀಕರಣಕ್ಕೆ ಮಂಗಳೂರು ಮಹಾನಗರಪಾಲಿಕೆಯೊಂದಿಗೆ ಕೈಜೋಡಿಸಲು ಬಹಳಷ್ಟು ಖಾಸಗಿ ವಲಯದ ಸಂಸ್ಥೆಗಳು ಮತ್ತು ವ್ಯಾಪಾರ ಸಂಘಗಳು ಮುಂದೆ ಬರುತ್ತಿರುವುದು ಹರ್ಷದಾಯಕವಾಗಿದೆ" ಎಂದು ಅವರು ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, “ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಪತ್ರಿಕೆಯಲ್ಲಿ ಓದಿದ ನಂತರ ದಕ್ಷಿಣ ಕನ್ನಡ ಆಟೋಮೊಬೈಲ್ ಮತ್ತು ಟೈರ್ ಡೀಲರ್ಸ್ ಅಸೋಸಿಯೇಷನ್ ಸ್ವಯಂ ಪ್ರೇರಿತವಾಗಿ ಕುಡಿಯುವ ನೀರು ಘಟಕ ಸ್ಥಾಪನೆಗೆ ಮುಂದಾಗಿದೆ. ಇದು ಉತ್ತಮ ಉಪಕ್ರಮವಾಗಿದ್ದು, ಹೆಚ್ಚಿನ ಸಂಸ್ಥೆಗಳು ನಿಮ್ಮ ಮಾದರಿಯನ್ನು ಅನುಸರಿಸಬಹುದು” ಎಂದು ಅವರು ಹೇಳಿದರು.
ಉಳಿದ ಐದು ಘಟಕಗಳನ್ನು ನಗರದ ಲೇಡಿ ಗೋಸ್ಚೆನ್ ಆಸ್ಪತ್ರೆ, ವಿಶ್ವವಿದ್ಯಾಲಯ ಕಾಲೇಜು, ಆರ್‍ಟಿಒ ಕಚೇರಿ, ಸಿಟಿ ಕಾರ್ಪೊರೇಷನ್ ಕಚೇರಿ ಎದುರು ಮತ್ತು ಲಾಲ್‍ಬಾಗ್ ಬಳಿಯ ಬಸ್ ನಿಲ್ದಾಣಗಳಲ್ಲಿ ಸ್ಥಾಪಿಸಲಾಗುತ್ತಿದೆ.
ಸಂಘದ ಅಧ್ಯಕ್ಷ ಕಸ್ತೂರಿ ಪ್ರಭಾಕರ ಪೈ, ಪೋಷಕ ಆರೂರು ಕಿಶೋರ್ ರಾವ್ ಹಾಗೂ ಪದಾಧಿಕಾರಿಗಳಾದ ಹರ್ಷಕುಮಾರ್ ಕೇದಿಗೆ, ಆತ್ಮಿಕಾ ಅಮೀನ್, ಮರೂರು ಶಶಿದರ್ ಪೈ, ಕೆ.ಲಕ್ಷ್ಮೀನಾರಾಯಣ ನಾಯಕ್, ಟಿ.ರತ್ನಾಕರ್ ಪೈ, ಭರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ವಿಲಾಸ್ ಕುಮಾರ್ ವಂದಿಸಿದರು.