ವ್ಯಾಟ್ ಪಾಸ್‍ವರ್ಡ್ ನೀಡಲು ಲಂಚ: ಗುತ್ತಿಗೆ ನೌಕರನಿಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಬೆಂಗಳೂರು, ಜೂ.1: ವಾಣಿಜ್ಯ ತೆರಿಗೆ ಇಲಾಖೆಯ ಇಂದಿರಾನಗರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿದ್ದ ಎಸ್.ಶ್ರೀನಿವಾಸಮೂರ್ತಿ ಎನ್ನುವವರು ಉದ್ಯಮಿಯೊಬ್ಬರಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಸಲ್ಲಿಸಲು ಯೂಸರ್ ನೇಮ್ ಮತ್ತು ಪಾಸ್‍ವರ್ಡ್ ನೀಡಲು 5 ಸಾವಿರ ಲಂಚ ಪಡೆದಿದ್ದ ಪ್ರಕರಣದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ಕೋರ್ಟ್ 4 ವರ್ಷ ಜೈಲು ಹಾಗೂ 10 ಸಾವಿರ ದಂಡ ವಿಧಿಸಿದೆ.
ದೊಮ್ಮಲೂರಿನಲ್ಲಿ ಕಂಪ್ಯೂಟರ್ ಸಲ್ಯೂಷನ್ಸ್ ಕಚೇರಿ ಹೊಂದಿದ್ದ ಶಾಂತಿನಗರದ ನಿವಾಸಿಯೊಬ್ಬರು ಆದಾಯ ತೆರಿಗೆ ದಾಖಲೆಗಳನ್ನು ಸಕಾಲಕ್ಕೆ ಸಲ್ಲಿಸದ ಕಾರಣದಿಂದ ಅವರ ವ್ಯಾಟ್ ಯೂಸರ್ ನೇಮ್ ಮತ್ತು ಪಾಸ್‍ವರ್ಡ್‍ಗಳನ್ನು 2018ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಪುನಹ ಅವುಗಳನ್ನು ನೀಡುವಂತೆ ಉದ್ಯಮಿ ಅರ್ಜಿ ಸಲ್ಲಿಸಿದ್ದರು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸಮೂರ್ತಿ ಅವರನ್ನು ಖುದ್ದು ಭೇಟಿ ಮಾಡಿದ್ದರು.
ಶ್ರೀನಿವಾಸಮೂರ್ತಿ ಯೂಸರ್ ನೇಮ್ ಮತ್ತು ಪಾಸ್‍ವರ್ಡ್ ನೀಡಲು 8 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. ಅರ್ಜಿದಾರರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಗುತ್ತಿಗೆ ನೌಕರನನ್ನು ಎಸಿಬಿ ಬಂಧಿಸಿತ್ತು. ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ, 2018ರ ನವೆಂಬರ್‍ನಲ್ಲೇ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿತ್ತು.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಪ್ರಕಟಿಸಿದ ವಿಶೇಷ ಕೋರ್ಟ್ ನ್ಯಾಯಪೀಠ, ಶ್ರೀನಿವಾಸಮೂರ್ತಿ ಅಪರಾಧಿ ಎಂದು ಆದೇಶಿಸಿದೆ. ಆರೋಪಿಗೆ 4 ವರ್ಷಗಳ ಜೈಲು ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.







