ಪೊಲೀಸರಿಗೆ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಪ್ರಕರಣ; ಅಮಾಯಕರ ಬಂಧನ: ಎಸ್‌ಡಿಪಿಐ ಆರೋಪ

ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಕಳೆದ ಶುಕ್ರವಾರ ನಡೆದ ಎಸ್‌ಡಿಪಿಐ ಕಾರ್ಯಕ್ರಮದಲ್ಲಿ ಭಾಗಿಯಾದ ಕೆಲವು ಯುವಕರು ಪೊಲೀಸರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣವು ಹೊಸ ಸ್ವರೂಪ ಪಡೆದಿದೆ.
ಕಾರ್ಯಕ್ರಮ ಸಂಘಟಕರ ಪ್ರೇರಣೆಯಿಂದ ಪೊಲೀಸರನ್ನು ನಿಂದಿಸಿರುವುದಾಗಿ ಬಂಧಿತ ಆರೋಪಿಗಳು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿಕೊಂಡಿದ್ದರೆ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್‌ಗೆ ಪೊಲೀಸ್ ಇಲಾಖೆಯು ರಾಜಾತಿಥ್ಯ ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಅಮಾಯಕರನ್ನು ಬಂಧಿಸುವ ಮೂಲಕ ಎಸ್‌ಡಿಪಿಐ ಪಕ್ಷವನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಎಸ್‌ಡಿಪಿಐ ಸಮಾವೇಶಕ್ಕೆ ತೆರಳುವ ವೇಳೆ ಪೊಲೀಸರನ್ನು ನಿಂದಿಸಲಾಗಿದೆ ಎಂದು ಆರೋಪಿಸಿ ಸುಮಾರು 10ಕ್ಕೂ ಹೆಚ್ಚು ಅಧಿಕ ಮಂದಿಯನ್ನು ಬಂಧಿಸಿದ್ದಾರೆ. ಇದರಲ್ಲಿ ಎಸ್‌ಡಿಪಿಐ ಕಾರ್ಯಕರ್ತರಲ್ಲದೆ ಇತರ ಅಮಾಯಕರೂ ಇದ್ದಾರೆ ಎಂದರು.
ಪೊಲೀಸರ ನಿಂದನೆ, ಪೊಲೀಸರ ವಿರುದ್ಧ ಘೋಷಣೆ, ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಖಂಡನೀಯವಾಗಿದೆ. ಪೊಲೀಸ್ ಇಲಾಖೆಯ ಬಗ್ಗೆ ಪಕ್ಷಕ್ಕೆ ಗೌರವವೂ ಇದೆ. ವೀಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳನ್ನು ಪಕ್ಷದ ನಾಯಕರು ಸಂಪರ್ಕಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು ಎಂದು ಅನ್ವರ್ ಸಾದಾತ್ ಬಜತ್ತೂರು ಸ್ಪಷ್ಟನೆ ನೀಡಿದರು.
ಪೊಲೀಸ್ ಆಯುಕ್ತರು ಪ್ರಮೋದ್ ಮುತಾಲಿಕ್‌ಗೆ ರಾಜಾತಿಥ್ಯ ನೀಡಿದ್ದನ್ನು ಎಸ್‌ಡಿಪಿಐ ಪ್ರಶ್ನಿಸಿತ್ತು. ಹಾಗಾಗಿ ಪೊಲೀಸ್ ಆಯುಕ್ತರು ಎಸ್‌ಡಿಪಿಐ ಪಕ್ಷವನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ಘಟನೆಯಲ್ಲಿ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದೆ. ಕೆಲವೇ ಮಂದಿ ಮಾಡಿದ ತಪ್ಪಿಗೆ ಸಮಾವೇಶದಲ್ಲಿ ಭಾಗವಹಿಸದವರನ್ನೂ ಕೂಡ ಬಂಧಿಸಲಾಗಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೂ ಸೇರಿದ್ದಾರೆ. ಬೆಂಗಳೂರು, ಮೈಸೂರಿಗೆ ತೆರಳಿ ಕೆಲವರನ್ನು ಬಂಧಿಸಲಾಗಿದೆ. ಈ ವೇಳೆ ಅವರ ಜೊತೆಗಿದ್ದವರನ್ನು ಆಶ್ರಯ ನೀಡಿದ ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದರು.
ಪೊಲೀಸ್ ಇಲಾಖೆಯು ಸಂಘ ಪರಿವಾರದ ಸೂಚನೆಯಂತೆ ಕೆಲಸ ಮಾಡುತ್ತಿದೆ. ಈ ಹಿಂದೆ ಹಿಂದುತ್ವವಾದಿ ಜಗದೀಶ್ ಕಾರಂತ ಪೊಲೀಸರಿಗೆ, ಜಿಲ್ಲಾಧಿಕಾರಿಗೆ ಬಹಿರಂಗವಾಗಿ ಧಮ್ಕಿ ಹಾಕಿದ್ದರು. ಆದರೆ ಕಾರಂತನ್ನು ಬಂಧಿಸಲು ಪೊಲೀಸರು ಆಗಿಲ್ಲ. ಬದಲಾಗಿ ಮೈಸೂರು, ಬೆಂಗಳೂರಿಗೂ ತೆರಳಿ ಅಮಾಯಕ ಯುವಕರನ್ನು ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದರ ವಿರುದ್ದ ಎಸ್‌ಡಿಪಿಐ ಕಾನೂನಾತ್ಮಕ ಹೋರಾಟ ನಡೆಸಲಿದೆ. ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಿದೆ. ಘೋಷಣೆ ಕೂಗಿದವರನ್ನು ನಾವು ಸಮರ್ಥಿಸುವುದಿಲ್ಲ. ಆದರೆ ಸಂಘ ಪರಿವಾರದವರನ್ನು ತೃಪ್ತಿ ಪಡಿಸಲು ಘಟನೆಗೆ ಸಂಬಂಧಪಡದವರನ್ನು ಬಂಧಿಸಲಾಗಿದೆ. ಇದರ ಹಿಂದೆ ಸ್ಥಳೀಯ ಶಾಸಕ, ಸಂಸದರ ಕೈವಾಡವೂ ಇದೆ ಎಂದು ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಇರ್ಶಾದ್ ಅಜ್ಜಿನಡ್ಕ ಉಪಸ್ಥಿತರಿದ್ದರು.







