ಮಂಗಳೂರು: ದಡ ಸೇರಿದ ಯಾಂತ್ರಿಕ ಮೀನುಗಾರಿಕೆಯ ಬೋಟ್ಗಳು
ಜೂ.1ರಿಂದ ಮೀನುಗಾರಿಕೆಗೆ ನಿಷೇಧ

ಫೈಲ್ ಫೋಟೊ
ಮಂಗಳೂರು: ರಾಜ್ಯ ಸರಕಾರವು ಎರಡು ತಿಂಗಳ ಕಾಲ (ಜೂ.1ರಿಂದ ಜುಲೈ 31ರವರೆಗೆ) ಯಾಂತ್ರಿಕ ಮೀನುಗಾರಿಕೆಗೆ ನಿಷೇಧ ಹೇರಿರುವ ಕಾರಣ ಮೀನುಗಾರರು ಬುಧವಾರ ತಮ್ಮ ಬೋಟ್ಗಳನ್ನು ಕಡಲಿಗೆ ಇಳಿಸಿಲ್ಲ. ಯಾಂತ್ರಿಕ ಮೀನುಗಾರಿಕಾ ಬೋಟ್ಗಳೆಲ್ಲವೂ ನಗರದ ಬಂದರ್ ದಕ್ಕೆಯ ದಡ ಸೇರಿವೆ.
ಡೀಸೆಲ್ ದರ ಏರಿಕೆಯಿಂದ ನಷ್ಟ ಅನುಭವಿಸಿದ್ದ ಬಹುತೇಕ ಯಾಂತ್ರಿಕ ಮೀನುಗಾರರು ಅವಧಿಗೆ ಮುನ್ನವೇ ಅಂದರೆ ಸುಮಾರು 20 ದಿನಗಳ ಹಿಂದೆ ದಡ ಸೇರಿಸಿದ್ದರು. ಕೆಲವರು ಅನಿವಾರ್ಯವಾಗಿ ಮೀನುಗಾರಿಕೆ ನಡೆಸಿದ್ದರು.
ಜೂ.1ರಿಂದ ಜುಲೈ 31ರವರೆಗೆ ಮೀನುಗಳ ಸಂತಾನ ಉತ್ಪತ್ತಿಯ ಅವಧಿಯಾದುದರಿಂದ ಎರಡು ತಿಂಗಳ ಕಾಲ ಯಾಂತ್ರಿಕ ಮೀನುಗಾರಿಕೆಯನ್ನು ಸರಕಾರ ನಿಷೇಧಿಸುತ್ತದೆ. ಹಾಗಾಗಿ ಈ ಅವಧಿಯಲ್ಲಿ ಮೀನುಗಾರಿಕೆ ಮಾಡುವಂತಿಲ್ಲ. ಸಹಜವಾಗಿ ಮೀನುಗಾರರು ದಡ ಸೇರುತ್ತಾರೆ.
ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಹೇರಿದ್ದರೂ ನಾಡದೋಣಿ ಮೀನುಗಾರಿಕೆ ನಡೆಸಬಹುದಾಗಿದೆ. ಅಂದರೆ ೧೨ ನಾಟಿಕಲ್ ಮೈಲ್ವರೆಗೆ ೧೦ ಅಶ್ವಶಕ್ತಿಯ ಇಂಜಿನ್ ಬಳಸಿ ನಾಡದೋಣಿಗಳಲ್ಲಿ ತೆರಳಿ ಮೀನುಗಾರಿಕೆ ನಡೆಸಲು ಸರಕಾರ ಅನುಮತಿ ನೀಡಿದೆ. ಆದರೆ ಯಾಂತ್ರೀಕೃತ ಮೀನುಗಾರಿಕೆ ನಡೆಸಿದರೆ ಸರಕಾರದಿಂದ ಸಿಗುವ ಮಾರಾಟ ದರ, ಡೀಸೆಲ್ ಸಹಿತ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.