ʼಕುವೆಂಪು ಮುಸ್ಲಿಂ ವಿರೋಧಿʼ ಎಂದು ಹೇಳಿದ್ದಾರೆಯೇ ಬೊಳುವಾರು ಮಹಮ್ಮದ್ ಕುಂಞಿ?
ಬೆಂಗಳೂರು: ಪಠ್ಯಪುಸ್ತಕ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಇದೀಗ ಪಠ್ಯಗಳಿಂದ ತನ್ನ ಪಾಠವನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದ ಹಿರಿಯ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ರಾಷ್ಟ್ರಕವಿ ಕುವೆಂಪು ಅವರನ್ನು ಬೊಳುವಾರು ಕುಂಞಿ ಅವರು ನಿಂದಿಸಿದ್ದಾರೆಂದು ಆರೋಪಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗುತ್ತಿದೆ.
ಕುವೆಂಪು ಅವರ ʼಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಮುಸ್ಲಿಂ ಪಾತ್ರಗಳಿಗೆ ಹೆಸರು ಇಲ್ಲದಿರುವ ಬಗ್ಗೆ ಬೊಳುವಾರು ಕುಂಞಿಯವರು ತಕರಾರು ಎತ್ತಿರುವುದನ್ನೇ ʼಕುವೆಂಪು ಅವರಿಗೆ ನಿಂದನೆʼ ಎಂದು ಆರೋಪಿಸಿ ಹರಿಯಬಿಡಲಾಗುತ್ತಿದೆ.
ಕುವೆಂಪುವನ್ನು ನನ್ನ ದೇವರು ಅನ್ನುವ ಬೊಳುವಾರರು, “ನನ್ನ ದೇವರು ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಒಳ್ಳೆಯ ಹಿಂದೂಗಳೂ ಇದ್ದಾರೆ ಕೆಟ್ಟ ಹಿಂದೂಗಳೂ ಇದ್ದಾರೆ, ಒಳ್ಳೆಯ ಕ್ರಿಶ್ಚಿಯನ್ನರೂ ಇದ್ದಾರೆ, ಕೆಟ್ಟ ಕ್ರಿಶ್ಚಿಯನ್ನರೂ ಇದ್ದಾರೆ, ಆದರೆ ಕೆಟ್ಟ ಮುಸ್ಲಿಮರು ಮಾತ್ರ ಇದ್ದಾರೆ” ಎಂದು ಈ ಹಿಂದೆಯೇ ತಮ್ಮ ಭಾಷಣಗಳಲ್ಲಿ ತಕರಾರೆತ್ತಿದ್ದರು.
ಕೆಲವು ತಿಂಗಳ ಹಿಂದೆ ಇದೇ ತಕರಾರನ್ನು ಕ್ಲಬ್‌ಹೌಸಿನಲ್ಲಿ ನಡೆದ ಚರ್ಚೆಯಲ್ಲೂ ಮುಂದಿಟ್ಟಿದ್ದರು. ʼ(ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ) ಮುಸ್ಲಿಮರಿಗೆ ಒಂದು ಹೆಸರೂ ಇಲ್ಲವೇ? ಇಸ್ಮಾಲಿನೋ, ಇಸುಬೋ ಏನಾದರೂ ಕೆಟ್ಟ ಹೆಸರೇ ಕೊಡಲಿ. ಒಂದು ಹೆಸರೂ ಇಲ್ಲ. ಪುಡಿ ಸಾಬಿ, ಇಜಾರ ಸಾಬಿ, ಲುಂಗಿ ಸಾಬಿ… ಏನ್ ಸಾರ್ ಇದು?. ನಾನು ಕುವೆಂಪು ಮನೆಗೆ ಹೋಗಿದ್ದಾಗ ನನಗೆ ಕೇಳಲು ಒಳ್ಳೆಯದಾಗಲಿಲ್ಲ. ನನಗಿಂತ ಹೆಚ್ಚು ಪ್ರಾಯವಾಗಿತ್ತು. ಆದರೆ, ನಾನು ಅವತ್ತೇ ತೀರ್ಮಾನ ಮಾಡಿದ್ದೆ. ಕುವೆಂಪು ಅವರಿಗಿಂತ ಒಳ್ಳೆಯ ಕಾದಂಬರಿ ಬರೆಯದಿದ್ದರೂ, ಕುವೆಂಪು ಬರೆದದಕ್ಕಿಂತ ದೊಡ್ಡ ಕಾದಂಬರಿ ಬರೆಯಬೇಕೆಂದು (ತೀರ್ಮಾನಿಸಿದ್ದೆ). ಅದನ್ನು ಸಾಧಿಸಿದ್ದೇನೆ ಕೂಡಾ. ಅವರು ಬರೆದದ್ದು 600 ಪುಟ, ನಾನು ಬರೆದದ್ದು 1100 ಪುಟʼ ಎಂದು ತಮ್ಮ ಎಂದಿನ ಲಘು ಹಾಸ್ಯದ ಶೈಲಿಯಲ್ಲಿ ಹೇಳಿದ್ದರು.
ಮುಂದುವರೆದು, “ಇದು, ಈ ದೇಶದ ಕುವೆಂಪುರಂತಹ ಮಹಾಮಾನವನ ಮನಸ್ಸಿನಲ್ಲಿ ಕೂಡಾ ಮುಸ್ಲಿಮರ ಬಗ್ಗೆ ಇರುವಂತಹ ಕಲ್ಪನೆ. ತಪ್ಪು ಕಲ್ಪನೆಯಲ್ಲ, ಕಲ್ಪನೆಯೇ ಹಾಗಿದೆ. ಕುವೆಂಪು ಇಂತಹ ತಪ್ಪು ಮಾಡುವಾಗ ಅಳು ಬರುತ್ತದೆ. ನಾನಿದನ್ನು ಆತ್ಮಕತೆಯಲ್ಲಿ ದಾಖಲೆ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದೇ ಆಡಿಯೋ ಇಟ್ಟುಕೊಂಡು, “ಕುವೆಂಪುಗಿಂತ ದೊಡ್ಡ ಪುಸ್ತಕ ಬರೆದಿದ್ದೇನೆ, ಕುವೆಂಪು ಮುಸ್ಲಿಂ ವಿರೋಧಿಯಾಗಿದ್ರು” ಎಂದು ಬೊಳುವಾರು ಕುಂಞಿ ಹೇಳಿರುವುದಾಗಿ ವೈರಲ್ ಮಾಡಲಾಗಿದೆ.
ಈ ಕುರಿತು ಬೊಳುವಾರು ಮಹಮ್ಮದ್ ಕುಂಞಿಯವರನ್ನು ವಾರ್ತಾ ಭಾರತಿ ಸಂಪರ್ಕಿಸಿದಾಗ, ʼಇದು ನನ್ನ ಆತ್ಮಕತೆ ಮೋನುಸ್ಮೃತಿಯಲ್ಲಿ ಉಲ್ಲೇಖಿಸಿದ್ದೇನೆ. ಅದನ್ನೇ ಕೊಂಡು ಓದಬಹುದುʼ ಎಂದು ಹೇಳಿದ್ದಾರೆ.
ವಿವಾದ ಮಾಡುತ್ತಿರುವ ಕುರಿತು ಪ್ರಶ್ನಿಸಿದಾಗ, ʼನಾನು ಕುವೆಂಪು ವಿರೋಧಿ ಎಂದು ಪ್ರಚಾರ ಮಾಡಿದರೆ, ಮಾಡಲಿ. ಕುವೆಂಪು ಪುಸ್ತಕವೂ ಸೇಲಾಗಲಿ, ನನ್ನ ಪುಸ್ತಕವೂ ಸೇಲಾಗುತ್ತದೆ. ಆಗಲಿ ಬಿಡಿʼ ಎಂದು ಲಘು ಹಾಸ್ಯದಿಂದಲೇ ಹೇಳಿದ್ದಾರೆ.
ಮುಂದುವರೆದು, ʼನಾನು ಅದನ್ನು ನಲವತ್ತು ವರ್ಷಗಳ ಹಿಂದೆ, ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡಿದ ಭಾಷಣದಲ್ಲಿಯೇ ಹೇಳಿದ್ದೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬರುವ ಮುಸ್ಲಿಂ ಪಾತ್ರಗಳಿಗೆ ಒಂದಕ್ಕೂ ಸರಿಯಾದ ಹೆಸರುಗಳಿಲ್ಲ. ಲುಂಗಿ ಸಾಬಿ, ಚಡ್ಡಿ ಸಾಬಿ, ಹಿಜಾಬ್ ಸಾಬು, ಇನ್ನೊಂದು ಸಾಬು… ಅದನ್ನು ಬೇರೆ ಯಾರೋ ಬರೆದಿದ್ದರೆ ತಕರಾರು ಇರಲಿಲ್ಲ, ವಿಶ್ವಮಾನವ ಕುವೆಂಪು ಬರೆದಿರೋದರಿಂದ ಮಾತ್ರ ಅದನ್ನು ಪ್ರಶ್ನಿಸಿದ್ದೇನೆ. ಅದು ನನ್ನ ಆತ್ಮಕತೆ ʼಮೋನುಸ್ಮೃತಿʼಯಲ್ಲಿ ಉಲ್ಲೇಖಿಸಿದ್ದೇನೆʼ ಎಂದು ತಿಳಿಸಿದ್ದಾರೆ.
ಕುವೆಂಪು, ದೇವನೂರು ಮಹಾದೇವ ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳಿಗೆ, ನಾಡಧ್ವಜಕ್ಕೆ ನಿಂದಿಸಿ, ನಾಡಗೀತೆಯನ್ನು ತಿರುಚಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತೀವ್ರ ಜನಾಕ್ರೋಶಕ್ಕೆ ಗುರಿಯಾಗಿರುವ ನಡುವೆಯೇ ಬೊಳುವಾರು ಕುಂಞಿಯವರ ವಿರುದ್ಧ ಈ ಆರೋಪ ಕೇಳಿ ಬಂದಿದೆ