ಇದು ದ್ವೇಷ ರಾಜಕೀಯ: ಸೋನಿಯಾ, ರಾಹುಲ್ ವಿರುದ್ಧ ಸಮನ್ಸ್ ಗೆ ಕಾಂಗ್ರೆಸ್ ಪ್ರತಿಕ್ರಿಯೆ

PHOTO:REUTERS
ಹೊಸದಿಲ್ಲಿ, ಜೂ. 1: ‘ನ್ಯಾಶನಲ್ ಹೆರಾಲ್ಡ್’ ಪ್ರಕರಣದಲ್ಲಿ ಅನುಷ್ಠಾನ ನಿರ್ದೇಶನಾಲಯ ನೀಡುವ ಯಾವುದೇ ಸಮನ್ಸ್ಗಳಿಗೆ ತಾನು ಹೆದರುವುದಿಲ್ಲ ಹಾಗೂ ಬಿಜೆಪಿ ಸರಕಾರದ ಇಂಥ ಯಾವುದೇ ‘‘ದ್ವೇಷ ಸಾಧನೆ’’ಗೆ ಮಣಿಯುವುದಿಲ್ಲ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
‘ನ್ಯಾಶನಲ್ ಹೆರಾಲ್ಡ್’ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಅನುಷ್ಠಾನ ನಿರ್ದೇಶನಾಲಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸಮನ್ಸ್ ನೀಡಿದೆ ಎಂದು ಕಾಂಗ್ರೆಸ್ ನಾಯಕರಾದ ಅಭಿಶೇಕ್ ಮನು ಸಿಂಘ್ವಿ ಮತ್ತು ರಣದೀಪ್ ಸುರ್ಜೇವಾಲಾ ತಿಳಿಸಿದರು. ಸೋನಿಯಾ ಗಾಂಧಿ ಬಳಿ ಅಡಗಿಸಿಡಲು ಏನೂ ಇಲ್ಲ, ಹಾಗಾಗಿ ವಿಚಾರಣೆಗೆ ಹಾಜರಾಗಲು ಅವರು ದೃಢ ನಿರ್ಧಾರ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೂ ಸಮನ್ಸ್ ನೀಡಲಾಗಿದೆ. ತಾನು ಸದ್ಯ ದೇಶದಲ್ಲಿ ಇಲ್ಲದಿರುವುದರಿಂದ ವಿಚಾರಣೆಯ ದಿನಾಂಕವನ್ನು ಜೂನ್ 5ರ ನಂತರಕ್ಕೆ ನಿಗದಿಪಡಿಸುವಂತೆ ಕೋರಿ ಅವರು ಅನುಷ್ಠಾನ ನಿರ್ದೇಶನಾಲಯಕ್ಕೆ ಪತ್ರ ಬರೆದಿದ್ದಾರೆ ಎಂದರು.
‘‘ಇಂಥ ನಕಲಿ ಮತ್ತು ಕಪೋಲಕಲ್ಪಿತ ಮೊಕದ್ದಮೆಗಳನ್ನು ದಾಖಲಿಸಿರುವುದು ಮೋದಿ ಸರಕಾರದ ಹೇಡಿತನದ ಪಿತೂರಿಯಾಗಿದೆ. ಅದರಲ್ಲಿ ಅವರು ಯಶಸ್ವಿಯಾಗುವುದಿಲ್ಲ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಘ್ವಿ ಹೇಳಿದರು.
ಸ್ವಾತಂತ್ರ ಚಳವಳಿಯ ಧ್ವನಿಯಾಗಿರುವ ನ್ಯಾಶನಲ್ ಹೆರಾಲ್ಡ್ ಪತ್ರಿಕೆಯನ್ನು ನಿಲ್ಲಿಸಲೂ ಅನುಷ್ಠಾನ ನಿರ್ದೇಶನಾಲಯಕ್ಕೆ ಸಾಧ್ಯವಾಗುವುದಿಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಬೆದರಿಸಲೂ ಅದಕ್ಕೆ ಸಾಧ್ಯವಾಗುವುದಿಲ್ಲ ಎಂದರು.
‘‘ಕಾಂಗ್ರೆಸ್ ನಾಯಕತ್ವವು ನಿರ್ಭೀತವಾಗಿದೆ ಹಾಗೂ ತನಿಖಾ ಸಂಸ್ಥೆಯ ಎದುರು ತನ್ನ ಹೇಳಿಕೆಗಳನ್ನು ದಾಖಲಿಸಲು ಸಿದ್ಧವಾಗಿದೆ. ಇಂಥ ತಂತ್ರಗಾರಿಕೆಗಳಿಗೆ ನಾವು ಹೆದರುವುದಿಲ್ಲ ಹಾಗು ಬಗ್ಗುವುದಿಲ್ಲ. ಆದರೆ ಇದರ ವಿರುದ್ಧ ನಾವು ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ ಎಂದು ಸಿಂಘ್ವಿ ಹೇಳಿದರು.
ಇಡೀ ಪಕ್ಷ ಮತ್ತು ಅದರ ಕಾರ್ಯಕರ್ತರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ ಹಾಗೂ ದೇಶದ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಈ ದಾಳಿಯ ವಿರುದ್ಧ ನಾವು ಹೋರಾಡಿ ಗೆಲ್ಲುತ್ತೇವೆ’’ ಎಂದು ಸುರ್ಜೇವಾಲಾ ಹೇಳಿದರು.







