ಮುಂಬೈ: ದೈನಂದಿನ ಕೊರೋನ ಸೋಂಕು ಪ್ರಕರಣಗಳಲ್ಲಿ ಅಗಾಧ ಏರಿಕೆ; ಎಚ್ಚರಿಕೆಯಿಂದಿರಲು ಸೂಚನೆ

ಮುಂಬೈ, ಜೂ.1: ದೈನಂದಿನ ಹೊಸ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ, ಎಚ್ಚರಿಕೆಯಿಂದಿರುವಂತೆ ಮುಂಬೈ ಮಹಾನಗರ ಪಾಲಿಕೆಯು ನಗರದ ಜನತೆಗೆ ಸೂಚನೆ ನೀಡಿದೆ.
ಮಳೆಗಾಲ ಕಾಲಿಡುತ್ತಿರುವಂತೆಯೇ, ಲಕ್ಷಣಗಳನ್ನು ತೋರಿಸುವ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧ ಹೆಚ್ಚಳ ಕಂಡುಬಂದಿದೆ ಎಂಬುದಾಗಿ ಎಚ್ಚರಿಸಿರುವ ಬೃಹನ್ಮುಂಬೈ ಮುನಿಸಿಪಲ್ಕಾರ್ಪೊರೇಶನ್ (ಬಿಎಮ್ಸಿ), ಪರೀಕ್ಷೆಗಳನ್ನು ಯುದ್ಧೋಪಾದಿಯಲ್ಲಿ ಹೆಚ್ಚಿಸುವಂತೆ ಕರೆ ನೀಡಿದೆ. ಅದೇ ವೇಳೆ, ಎಲ್ಲ ವಯೋ ಗುಂಪುಗಳ ಲಸಿಕಾ ಅಭಿಯಾನಕ್ಕೆ ವೇಗ ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದೆ.
ಮುಂಬೈಯಲ್ಲಿ ಮಂಗಳವಾರ 700 ಕೊರೋನ ವೈರಸ್ ಪ್ರಕರಣಗಳು ದಾಖಲಾದ ಬಳಿಕ ಈ ಬೆಳವಣಿಗೆ ಕಾಣಿಸಿಕೊಂಡಿದೆ. ಒಂದು ದಿನದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಪಕ್ರರಣಗಳು ವರದಿಯಾಗಿರುವುದು 114 ದಿನಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಎಪ್ರಿಲ್‌ಗೆ ಹೋಲಿಸಿದರೆ ಮೇ ತಿಂಗಳ ಕೊನೆಯಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ 152% ಹೆಚ್ಚಳವಾಗಿದೆ. ಆದರೆ, ಸಾವಿನ ಪ್ರಮಾಣವು 70%ದಷ್ಟು ಗಣನೀಯ ಪ್ರಮಾಣದಲ್ಲಿ ತಗ್ಗಿದೆ.





