ಮೈಸೂರು: ಸುತ್ತೂರು ಮಠಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್.ವಿ.ರಮಣ ಭೇಟಿ

ಮೈಸೂರು,ಜೂ.1: ಸುತ್ತೂರು ಮಠ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠದ ಸೇವೆಗಳ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳಾದ ಎನ್.ವಿ. ರಮಣರವರು ದಂಪತಿ ಸಮೇತರಾಗಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಸುತ್ತೂರು ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದೇಶದ ಯಾವುದೇ ಮೂಲೆಯ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಯಾವ ಅಡೆತಡೆಗಳಿಲ್ಲದೆ ಎಲ್ಲ ಸೌಲಭ್ಯಗಳು ದೊರೆಯಬೇಕು ಹಾಗೆ ಆದಾಗ ಸಾಮಾನ್ಯರು ಸೌಲಭ್ಯಗಳಿಗಾಗಿಯೇ ನ್ಯಾಯಾಲಯಗಳನ್ನು ಮೊರೆ ಹೋಗುವುದು ತಪ್ಪುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಶ್ರೀಗಳೊಂದಿಗೆ ಸಮಾಲೋಚಿಸಿದರು.
ಶ್ರೀ ಸುತ್ತೂರು ಮಠ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠದ ವತಿಯಿಂದ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಸಾಮಾಜಿಕವಾಗಿ ಸಲ್ಲಿಸುತ್ತಿರುವ ಸೇವೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಮೇರಿಲ್ಯಾಂಡ್ ನಲ್ಲಿರುವ ಜೆಎಸ್‍ಎಸ್ ಆಧ್ಯಾತ್ಮಿಕ ಕೇಂದ್ರಕ್ಕೆ ಭೇಟಿ ನೀಡಲು ಆಹ್ವಾನಿಸಲಾಯಿತು.





