ಶಾಂತವೀರ ಸ್ವಾಮೀಜಿ ಸಾವಿನ ಕುರಿತು ತನಿಖೆಗೆ ಒತ್ತಾಯ

ಬೆಂಗಳೂರು, ಜೂ.1: ಕೊಳದ ಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಾಂತವೀರ ಸ್ವಾಮೀಜಿ ಸಾವು ಅನುಮಾನ ಹುಟ್ಟುಹಾಕಿದ್ದು, ಈ ಸಂಬಂಧ ರಾಜ್ಯ ಸರಕಾರ ವಿಶೇಷ ತಂಡ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸ್ವಾಮೀಜಿಯವರ ಪೂರ್ವಾಶ್ರಮದ ಕೆಲ ಸಂಬಂಧಿಕರು ಆಗ್ರಹಿಸಿದ್ದಾರೆ.
ಬುಧವಾರ ಈ ಕುರಿತು ನಗರ ಪೊಲೀಸ್ ಪ್ರತಾಪ್ ರೆಡ್ಡಿ ಅವರಿಗೆ ದೂರು ನೀಡಿರುವ ಸಂಬಂಧಿಕರು, ಕೋಟ್ಯಾಂತರ ರೂಪಾಯಿ ಮೌಲ್ಯದ 11 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಠವಿದೆ. ಚಿನ್ನಾಭರಣವೂ ಅಪಾರ ಪ್ರಮಾಣವಿದೆ. ಇದನ್ನೆಲ್ಲ ಕಬಳಿಸುವ ಉದ್ದೇಶದಿಂದ ಲಾಭಕ್ಕಾಗಿ ಸ್ವಾಮೀಜಿ ಅವರನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾಮೀಜಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹೇಳಲಾಗುತ್ತಿದೆ. ಸಾವಿನ ಬಗ್ಗೆ ಸಂಶಯವಿದ್ದರೂ ಮರಣೋತ್ತರ ಪರೀಕ್ಷೆ ಮಾಡಿಸಿಲ್ಲ. ಈ ಬಗ್ಗೆ ಒತ್ತಾಯಿಸಿದ್ದಕ್ಕೆ ಸಂಬಂಧಿಕರ ವಿರುದ್ಧವೇ ಪೊಲೀಸರಿಗೆ ದೂರು ನೀಡಲಾಗಿದೆ. ಮರಣೋತ್ತರ ಪರೀಕ್ಷೆ ತಪ್ಪಿಸಿ ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿದೆ. ಸ್ವಾಮೀಜಿಗೆ 5 ಕೋಟಿ ವಂಚಿಸಿದ್ದ ವೈದ್ಯನಿಂದಲೇ ಸ್ವಾಮೀಜಿ ಸಾವಿನ ಬಗ್ಗೆ ಪ್ರಮಾಣೀಕರಿಸಲಾಗಿದೆ. ಜೊತೆಗೆ, ಮಠದ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ.
ಸ್ವಾಮೀಜಿ ಅವರ ಆರೋಗ್ಯವೂ ಚೆನ್ನಾಗಿತ್ತು. ಅವರ ದಿಢೀರ್ ಸಾವು ನಂಬಲಾಗುತ್ತಿಲ್ಲ. ಕೆಲ ವರ್ಷಗಳಿಂದ ಸ್ವಾಮೀಜಿ ಸುತ್ತಲೂ ದುಷ್ಟಕೂಟ ಸಕ್ರಿಯವಾಗಿತ್ತು. ಸ್ವಾಮೀಜಿಗೆ ಕಿರುಕುಳ ನೀಡುತ್ತಿತ್ತು. ಈ ಬಗ್ಗೆ ಸ್ವಾಮೀಜಿಯೇ ನಮಗೆ ಕರೆ ಮಾಡಿ ತಿಳಿಸಿದ್ದರು ಎಂದು ದೂರಿದ್ದಾರೆ.
ಮಠಕ್ಕೆ ಆಡಳಿತಾಧಿಕಾರಿ ನೇಮಿಸಿ, ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡಿಸಬೇಕು ಎಂದೂ ಆಗ್ರಹಿಸಿರುವ ಅವರು, ಎ.30ರಂದು ಮಠದ ಹಾಲ್‍ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಸ್ವಾಮೀಜಿ ನಿಧನರಾದ ಬಗ್ಗೆ ನಮಗೆ ಸುದ್ದಿ ಬಂದಿತ್ತು. ಆದರೆ, ಅವರು ನಿತ್ಯವೂ ಕೊಠಡಿಯೊಳಗೆ ಮಲಗುತ್ತಿದ್ದರು ಎಂದು ದೂರುದಾರರು ಆಪಾದಿಸಿದ್ದಾರೆ.







