ಅದಾನಿ ಯುಪಿಸಿಎಲ್‌ಗೆ 52 ಕೋಟಿ ರೂ. ದಂಡ ವಿಧಿಸಿದ ಚೆನ್ನೈನ ಹಸಿರು ಪೀಠ
ಕೃಷಿ ಹಾನಿ ವರದಿಗೆ ಸಮಿತಿ ರಚನೆ

ಉಡುಪಿ: ಜಿಲ್ಲೆಯ ಪಡುಬಿದ್ರೆ ಸಮೀಪದ ಎಲ್ಲೂರು ಗ್ರಾಮದಲ್ಲಿ 2005ರಿಂದ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಅದಾನಿ ಆಡಳಿತದ ಉಡುಪಿ ಉಷ್ಣವಿದ್ಯುತ್ ಸ್ಥಾವರ, ತನ್ನ 10 ಕಿ.ಮೀ. ವ್ಯಾಪ್ತಿಯಲ್ಲಿ ಮಾಡಿರುವ ಪರಿಸರ ಹಾನಿಗಾಗಿ 52 ಕೋಟಿ ರೂ. (52,02,50,000ರೂ.) ದಂಡವನ್ನು ಪರಿಹಾರ ರೂಪದಲ್ಲಿ ಪಾವತಿಸು ವಂತೆ ಚೆನ್ನೈನ ರಾಷ್ಟ್ರೀಯ ಹಸಿರು ಪೀಠ ಮಂಗಳವಾರ ಆದೇಶ ನೀಡಿದೆ.
ಕಳೆದ ಸುಮಾರು ಮೂರು ದಶಕಗಳಿಗೂ ಅಧಿಕ ಸಮಯದಿಂದ ಪಡುಬಿದ್ರಿ ಪರಿಸರದಲ್ಲಿ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ ಹೋರಾಟ ನಡೆಸಿಕೊಂಡು ಬರುತ್ತಿರುವ ಬಾಲಕೃಷ್ಣ ಶೆಟ್ಟಿ ಅವರ ಅಧ್ಯಕ್ಷತೆಯ ನಂದಿಕೂರು ಜನಜಾಗೃತಿ ಸಮಿತಿ ರಾ.ಹಸಿರು ಪೀಠದ ದಕ್ಷಿಣ ವಲಯ ಪೀಠದ ಮುಂದೆ ಹೂಡಿದ ವ್ಯಾಜ್ಯದ ಕುರಿತಂತೆ ಪೀಠ ನಿನ್ನೆ ತನ್ನ ಅಂತಿಮ ತೀರ್ಪನ್ನು ನೀಡಿದೆ.
ಇದರೊಂದಿಗೆ ಈ ಪರಿಸರದಲ್ಲಿ ರೈತರಿಗೆ ಆಗಿರಬಹುದಾದ ಕೃಷಿ ಹಾನಿಯ ಕುರಿತಂತೆಯೂ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳ ನೇತೃತ್ವದ ವಿಶೇಷ ಸಮಿತಿಯೊಂದನ್ನು ಸಹ ರಚಿಸಿ ಹಸಿರು ಪೀಠ ಆದೇಶ ನೀಡಿದೆ. ಸಮಿತಿ ನೀಡುವ ವರದಿಯಾಧಾರದಲ್ಲಿ ಕೃಷಿ ಹಾನಿಯ ಮೊತ್ತವನ್ನು ಸಹ ಯುಪಿಸಿಎಲ್ ಸಂತ್ರಸ್ಥ ರೈತರಿಗೆ ಪಾವತಿಸಬೇಕು ಎಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ಹಸಿರು ಪೀಠ ಈ ಹಿಂದೆ ಎರಡೆರಡು ಸಮಿತಿಗಳನ್ನು ಪರಿಸರಕ್ಕಾದ ಹಾನಿಯ ಅಂದಾಜಿಗೆ ರಚಿಸಿ ಸ್ಥಳಕ್ಕೆ ಕಳುಹಿಸಿದ್ದರೂ, ಅವುಗಳು ನೀಡಿದ ವರದಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಸಂತ್ರಸ್ಥರಿಗೆ ನ್ಯಾಯ ದೊರಕಿಸಿಕೊಡಲು ವಿಫಲವಾಗಿತ್ತು. ಒಂದು ಸಮಿತಿ ಕೇವಲ 4.89 ಕೋಟಿ ರೂ. ದಂಡವನ್ನು ಕಂಪೆನಿಗೆ ವಿಧಿಸುವಂತೆ ವರದಿಯಲ್ಲಿ ತಿಳಿಸಿತ್ತು.
ಇದರ ವಿರುದ್ಧ ನಂದಿಕೂರು ಜನಜಾಗೃತಿ ಸಮಿತಿ ಮೇಲ್ಮನವಿ ಸಲ್ಲಿಸಿದ್ದು, ಇದರಂತೆ ಹಸಿರು ಪೀಠದಿಂದ ನೇಮಕಗೊಂಡ ಮತ್ತೊಂದು ಸಮಿತಿ ಒಟ್ಟಾರೆಯಾಗಿ 74.93 ಕೋಟಿ ರೂ. ಪರಿಹಾರ ನೀಡುವಂತೆ ವರದಿಯಲ್ಲಿ ತಿಳಿಸಿತ್ತು.







