ಲಖಿಂಪುರಖೇರಿ ರೈತರ ಮೇಲೆ ಕಾರು ಹರಿಸಿದ ಪ್ರಕರಣದ ಸಾಕ್ಷಿಯ ಹತ್ಯೆ ಯತ್ನ: ದೂರು ದಾಖಲು

ಲಖಿಂಪುರಖೇರಿ (ಉತ್ತರಪ್ರದೇಶ), ಜೂ. 1: ಲಖಿಂಪುರಖೇರಿ ಪ್ರಕರಣದ ಸಾಕ್ಷಿಯಾಗಿರುವ ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು)ದ ನಾಯಕ ದಿಲ್ಬಾಗ್ ಸಿಂಗ್ ಅವರು ಮಂಗಳವಾರ ಎಸ್ಯುವಿ ವಾಹನದಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಲಖಿಂಪುರಖೇರಿಯಲ್ಲಿ ಅನಾಮಿಕ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲು ಯತ್ನಿಸಿದ್ದಾರೆ.
ತಾನು ಮಂಗಳವಾರ ರಾತ್ರಿ ಎಸ್ ಯುವಿ ವಾಹನದಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಅಲಿಗಂಜ್ ಸಮೀಪದ ರಸ್ತೆಯಲ್ಲಿ ಕಾರಿನ ಮೇಲೆ ಎರಡು ಬಾರಿ ಗುಂಡು ಹಾರಿಸಿ ಪರಾರಿಯಾದರು ಎಂದು ಭಾರತಿಯ ಕಿಸಾನ್ ಒಕ್ಕೂಟದ ಲಖಿಂಪುರಖೇರಿ ಜಿಲ್ಲಾಧ್ಯಕ್ಷ ದಿಲ್ಬಾಗ್ ಸಿಂಗ್ ಅವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಸಿಂಗ್ ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಹತ್ಯೆ ಯತ್ನ ಆರೋಪಿಸಿ ಲಖಿಂಪುರಖೇರಿಯ ಗೋಲಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ಕುರಿತು ನಾವು ತನಿಖೆ ಆರಂಭಿಸಿದ್ದೇವೆ ಎಂದು ಗೋಲಾ (ಲಖಿಂಪುರಖೇರಿ)ದ ಸರ್ಕಲ್ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ. ಘಟನೆ ಸಂಭವಿಸುವಾಗ ಪೊಲೀಸರು ಒದಗಿಸಿದ ಗನ್ಮ್ಯಾನ್ ಅಲ್ಲಿರಲಿಲ್ಲ ಎಂದು ಪ್ರಾಥಮಿಕ ತನಿಖೆ ಸಂದರ್ಭ ಬೆಳಕಿಗೆ ಬಂದಿದೆ ಎಂದು ಕುಮಾರ್ ಹೇಳಿದ್ದಾರೆ.
ತಾನು ರಾತ್ರಿ ಸುಮಾರು 8.30ರ ಹೊತ್ತಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದೆ. ಈ ಸಂದರ್ಭ ಇಬ್ಬರು ದುಷ್ಕರ್ಮಿಗಳು ಬೈಕ್ ನಲ್ಲಿ ಹಿಂಬಾಲಿಸಿದರು. ಅವರು ತನ್ನ ಕಾರಿನ ಟಯರ್ಗೆ ಗುಂಡು ಹಾರಿಸಿದರು. ಇದರಿಂದ ಟಯರ್ ಸ್ಫೋಟಗೊಂಡಿತು. ಕಾರು ಸ್ಪಲ್ಪ ದೂರದಲ್ಲಿ ನಿಂತಿತು. ಅವರು ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸಿದರು. ವಿಫಲರಾದಾಗ, ಕಾರಿನ ಮೇಲೆ ಎರಡು ಬಾರಿ ಗುಂಡು ಹಾರಿಸಿದರು ಹಾಗೂ ಪರಾರಿಯಾದರು ಎಂದು ಸಿಂಗ್ ತಿಳಿಸಿದ್ದಾರೆ.
ಗನ್ಮ್ಯಾನ್ ಬಗ್ಗೆ ಕೇಳಿದಾಗ ಸಿಂಗ್, ‘‘ಆತ ಕೆಲವು ಕೆಲಸದ ಮೇಲೆ ಹೋಗಿದ್ದ. 15 ನಿಮಿಷಗಳ ಬಳಿಕ ಹಿಂದಿರುಗಿ ಬಂದ’’ ಎಂದಿದ್ದಾರೆ. ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಷ್ ಮಿಶ್ರಾ ಎಸ್ಯುವಿ ವಾಹನ ಚಲಾಯಿಸಿ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತನನ್ನು ಹತ್ಯೆಗೈದಿದ್ದಾರೆ ಎಂದು ಹೇಳಲಾದ ಲಖಿಂಪುರಖೇರಿ ಹಿಂಸಾಚಾರ ಪ್ರಕರಣದಲ್ಲಿ ದಿಲ್ಬಾಗ್ ಸಿಂಗ್ ಸಾಕ್ಷಿಯಾಗಿದ್ದಾರೆ.