ವಕ್ಫ್ ಬೋರ್ಡ್ ಕಚೇರಿಯಲ್ಲಿ ಸಿಬ್ಬಂದಿ ಜೊತೆ ಸಾರ್ವಜನಿಕಕ ಭೇಟಿಗೆ ನಿರ್ಬಂಧ: ಮೌಲಾನ ಶಾಫಿ ಸಅದಿ

ಬೆಂಗಳೂರು, ಜೂ.1: ರಾಜ್ಯ ವಕ್ಫ್ ಬೋರ್ಡ್ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳೊಂದಿಗೆ ಕೆಲಸದ ಅವಧಿಯಲ್ಲಿ ಅನುಮತಿಯಿಲ್ಲದೆ ಸಾರ್ವಜನಿಕರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ತಿಳಿಸಿದರು.
ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್‍ನ ಕೇಂದ್ರ ಕಚೇರಿ ‘ದಾರುಲ್ ಔಕಾಫ್’ನಲ್ಲಿ ಕಚೇರಿಯ ಸಿಬ್ಬಂದಿಗಳಿಗೆ ಆಕ್ಸಿಸ್(ಪ್ರವೇಶ) ಕಾರ್ಡುಗಳನ್ನು ವಿತರಿಸಿ ಅವರು ಮಾತನಾಡಿದರು.
ರಾಜ್ಯ ವಕ್ಫ್ ಬೋರ್ಡ್‍ನ ಕಾರ್ಯವೈಖರಿ ಬಗ್ಗೆ ಸಮಾಜದಲ್ಲಿ ಉತ್ತಮ ಅಭಿಪ್ರಾಯವಿಲ್ಲ. ಅಲ್ಲದೆ, ವಕ್ಫ್ ಬೋರ್ಡ್‍ನಲ್ಲಿನ ಕೆಲಸಗಳು ಸಕಾಲಕ್ಕೆ ಪೂರ್ಣಗೊಳ್ಳದೆ ಅನಗತ್ಯ ವಿಳಂಬ ಹೆಚ್ಚಾಗುತ್ತದೆ, ಕಡತಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂಬ ಆಪಾದನೆಗಳು ಹೆಚ್ಚಿವೆ ಎಂದು ಅವರು ಹೇಳಿದರು.
ಸಾರ್ವಜನಿಕರೊಂದಿಗೆ ವಕ್ಫ್ ಬೋರ್ಡ್‍ನ ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸುವುದಿಲ್ಲ. ಆದರೆ, ತಮ್ಮನ್ನು ವಕ್ಫ್ ಬೋರ್ಡ್‍ನ ಏಜೆಂಟರು ಎಂದು ಕರೆಸಿಕೊಂಡು ಇಲ್ಲಿ ಕಚೇರಿಯ ಸುತ್ತಮುತ್ತಲೂ ತಿರುಗಾಡುವಂತಹವರ ಜೊತೆ ಉತ್ತಮ ಸಂಬಂಧ ಹೊಂದಿರುತ್ತಾರೆ ಎಂದು ಆರೋಪಗಳು ಇವೆ ಎಂದು ಶಾಫಿ ಸಅದಿ ಹೇಳಿದರು.
ರಾಜ್ಯ ವಕ್ಫ್ ಬೋರ್ಡ್ ಕಚೇರಿಯನ್ನು ಇಂತಹ ಆರೋಪ, ಆಪಾದನೆಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ಹಾಗೂ ಸಿಬ್ಬಂದಿಗಳಲ್ಲಿ ಶಿಸ್ತು ಮೂಡಿಸಲು ಪ್ರತಿಯೊಬ್ಬರಿಗೂ ಆಕ್ಸಿಸ್ ಕಾರ್ಡುಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಿಬ್ಬಂದಿಗಳ ಕೆಲಸ, ಕಾರ್ಯದಲ್ಲಿ ಯಾವುದೆ ರೀತಿಯ ವಿಳಂಬ ಆಗಬಾರದು ಹಾಗೂ ಹಸ್ತಕ್ಷೇಪಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಉದ್ದೇಶದಿಂದ, ಕಚೇರಿಯ ಕೆಲಸದ ಅವಧಿಯಲ್ಲಿ ಸಿಬ್ಬಂದಿ ಜೊತೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಶಾಫಿ ಸಅದಿ ತಿಳಿಸಿದರು.
ಒಂದು ವೇಳೆ ಯಾರಾದರೂ ಅನಿವಾರ್ಯವಾಗಿ ಸಿಬ್ಬಂದಿಯನ್ನು ಭೇಟಿ ಮಾಡಲೇಬೇಕಾದ ಪರಿಸ್ಥಿತಿ ಇದ್ದಲ್ಲಿ, ಅಂತಹವರು ವಕ್ಫ್ ಬೋರ್ಡ್ ಅಧ್ಯಕ್ಷ ಅಥವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮತಿಯೊಂದಿಗೆ ಭೇಟಿ ಮಾಡಬಹುದಾಗಿದೆ ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್ ಸಿಬ್ಬಂದಿಗಳು ಕಚೇರಿ ಪ್ರವೇಶಿಸುವಾಗ ಹಾಗೂ ನಿರ್ಗಮಿಸುವಾಗ ಈ ಪ್ರವೇಶ ಕಾರ್ಡ್ ಅನ್ನು ಸ್ಕ್ಯಾನ್ ಮಾಡಲೇಬೇಕು. ಎಷ್ಟು ಬಾರಿ ಕಚೇರಿಯಿಂದ ಹೊರಗೆ ಹೋಗಿ, ಹಿಂದಿರುಗುತ್ತಾರೋ ಅಷ್ಟು ಬಾರಿಯೂ ಕಾರ್ಡ್ ಸ್ಕ್ಯಾನ್ ಮಾಡಲೇಬೇಕು ಎಂದು ಶಾಫಿ ಸಅದಿ ತಿಳಿಸಿದರು.







