ಇಸ್ರೇಲ್ ಪಡೆಯಿಂದ ಪೆಲೆಸ್ತೀನಿಯನ್ ಮಹಿಳೆಯ ಹತ್ಯೆ
Mourners at the hospital[Reuters]
ಜೆರುಸಲೇಂ, ಜೂ.1: ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯ ಅರೌಬ್ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ಪಡೆ ಪೆಲೆಸ್ತೀನ್ ಮಹಿಳೆಯನ್ನು ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ಮೃತ ಮಹಿಳೆಯನ್ನು 31 ವರ್ಷದ ಘುಫ್ರಾನ್ ಹಮೀದ್ ವರಾಸ್ನೆ ಎಂದು ಗುರುತಿಸಲಾಗಿದ್ದು ಅವರ ಎದೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೆಲೆಸ್ತೀನ್ ಆರೋಗ್ಯ ಇಲಾಖೆ ಹೇಳಿದೆ.
ದೈನಂದಿನ ಭದ್ರತಾ ವ್ಯವಸ್ಥೆಯಲ್ಲಿ ನಿರತರಾಗಿದ್ದ ಇಸ್ರೇಲ್ ಯೋಧರತ್ತ ಚಾಕು ಹಿಡಿದ ಆಕ್ರಮಣಕಾರ ಮುನ್ನುಗ್ಗಿ ಬಂದಾಗ ಯೋಧರು ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ. ಆದರೆ ಮಹಿಳೆ ಸಣ್ಣ ಚೂರಿಯನ್ನು ಹಿಡಿದುಕೊಂಡಿದ್ದರು ಮತ್ತು ಯೋಧರಿಗೆ ಬೆದರಿಕೆ ಒಡ್ಡಿರಲಿಲ್ಲ . ರೇಡಿಯೊ ಸ್ಟೇಷನ್ನಲ್ಲಿ 3 ದಿನದ ಹಿಂದಷ್ಟೇ ಉದ್ಯೋಗಕ್ಕೆ ಸೇರಿದ್ದ ಅವರು ಕೆಲಸಕ್ಕೆ ತೆರಳುತ್ತಿದ್ದಾಗ ಶಿಬಿರದ ಪ್ರವೇಶ ದ್ವಾರದ ಬಳಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಅಲ್ಜಝೀರಾ ವರದಿ ಮಾಡಿದೆ.
ಗುಂಡೇಟಿನಿಂದ ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲು ಇಸ್ರೇಲ್ ಪಡೆ ತಡೆಯೊಡ್ಡಿದೆ. 20 ನಿಮಿಷದ ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು. ಎದೆಗೆ ಬಡಿದ ಬುಲೆಟ್ ಅವರ ಹೃದಯವನ್ನು ಚೂರಾಗಿಸಿದೆ ಎಂದು ವೈದ್ಯರು ಘೋಷಿಸಿರುವುದಾಗಿ ಪೆಲೆಸ್ತೀನಿಯನ್ ರೆಡ್ಕ್ರೆಸೆಂಟ್ ಅಧಿಕಾರಿಗಳು ಹೇಳಿದ್ದಾರೆ.
ಘುಫ್ರಾನ್ ಹಮೀದ್ 3 ತಿಂಗಳು ಇಸ್ರೇಲ್ ಜೈಲಿನಲ್ಲಿದ್ದು ಎಪ್ರಿಲ್ನಲ್ಲಿ ಬಿಡುಗಡೆಗೊಂಡಿದ್ದರು ಎಂದು ಪೆಲೆಸ್ತೀನಿಯನ್ ಪ್ರಿಸನರ್ಸ್ ಸೊಸೈಟಿ ಹೇಳಿದೆ. ಆಕ್ರಮಿತ ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸೇನೆ ಅತಿಯಾದ ಬಲ ಪ್ರಯೋಗಿಸುತ್ತಿದೆ ಮತ್ತು ಪೆಲೆಸ್ತೀನಿಯರನ್ನು ಗುಂಡಿಕ್ಕಿ ಹತ್ಯೆ ಮಾಡುವ ನೀತಿ ಅನುಸರಿಸುತ್ತಿದೆ ಎಂದು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಖಂಡಿಸಿದೆ.