ಅಬುಧಾಬಿಗೆ ಪ್ರಯಾಣಿಸಲು ನಟಿ ರಿಯಾ ಚಕ್ರವರ್ತಿಗೆ ನ್ಯಾಯಾಲಯ ಅನುಮತಿ

photo: pti
ಮುಂಬೈ, ಜೂ. 1: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಮಾದಕ ದ್ರವ್ಯ ಪ್ರಕರಣದ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿಗೆ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾಲ್ಕು ದಿನಗಳ ಕಾಲ ಅಬುಧಾಬಿಗೆ ಪ್ರಯಾಣಿಸಲು ಇಲ್ಲಿನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ. ಪಾಸ್ಪೋರ್ಟ್ ಅನ್ನು ಚಕ್ರವರ್ತಿ ಅವರಿಗೆ ಹಸ್ತಾಂತರಿಸುವಂತೆ ಹಾಗೂ ಜೂನ್ 2ರಿಂದ 5ರ ವರೆಗೆ ಅಬುಧಾಬಿಗೆ ಪ್ರಯಾಣಿಸಲು ಅನುಮತಿ ನೀಡುವಂತೆ ವಿಶೇಷ ನ್ಯಾಯಾಧೀಶ ಎ.ಎ. ಜೋಗ್ಲೇಕರ್ ಅವರು ಪ್ರಕರಣದ ತನಿಖೆ ನಡೆಸುತ್ತಿರುವ ಮಾದಕದ್ರವ್ಯ ನಿಯಂತ್ರಣ ಬ್ಯೂರೊ (ಎನ್ಸಿಬಿ)ದ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಆದರೆ, ನ್ಯಾಯಾಲಯ ಚಕ್ರವರ್ತಿ ಅವರಿಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ಹಾಜರಾತಿ ದಾಖಲಿಸಲು ದಿನನಿತ್ಯ ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮುಂದ ಹಾಜರಾಗಬೇಕು, ಪ್ರಯಾಣ ದಾಖಲೆಗಳನ್ನು ಎನ್ಸಿಬಿಗೆ ಸಲ್ಲಿಸಬೇಕು ಹಾಗೂ ಭಾರತಕ್ಕೆ ಹಿಂದಿರುಗಿದ ಬಳಿಕ ಪಾಸ್ಪೋರ್ಟ್ ಅನ್ನು ಎನ್ಸಿಬಿ ಒಪ್ಪಿಸಬೇಕು ಎಂದು ಅದು ಹೇಳಿದೆ.
ಹೆಚ್ಚುವರಿ ನಗದು ಭದ್ರತೆ 1 ಲಕ್ಷ ರೂಪಾಯಿಯನ್ನು ನ್ಯಾಯಾಲಯ ರಿಜಿಸ್ಟ್ರಿಗೆ ಅರ್ಜಿದಾರೆ ಸಲ್ಲಿಸಬೇಕು ಎಂದು ವಿಶೇಷ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.







