ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸುವ ಕುತಂತ್ರವನ್ನು ಸೋಲಿಸಬೇಕಿದೆ: ಯು.ಬಸವರಾಜ

ಮಂಗಳೂರು, ಜೂ.2: ಬಿಜೆಪಿ ಹಾಗೂ ಆರೆಸ್ಸೆಸ್ ಮತ್ತು ಮುಸ್ಲಿಮ್ ಕೋಮುವಾದಿ ಶಕ್ತಿಗಳು ಮುಂಬರುವ ಚುನಾವಣೆಗಳಲ್ಲಿ ಜಾತ್ಯತೀತ ಶಕ್ತಿಗಳನ್ನು ದುರ್ಬಲಗೊಳಿಸಿ ಕಾರ್ಪೊರೇಟ್ ಲೂಟಿ ಮುಂದುವರಿಸಲು ಅವಕಾಶ ನೀಡುವ ಹುನ್ನಾರ ನಡೆಸುತ್ತಿದ್ದು, ರಾಜ್ಯದ ಜನತೆ ಪ್ರಬುದ್ಧತೆಯಿಂದ ಇದನ್ನು ಸೋಲಿಸಬೇಕಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುತ್ವ ಮತಾಂಧ ಶಕ್ತಿಗಳು ರಾಜ್ಯವನ್ನು ಲೂಟಿ ಮಾಡುವ ಶಕ್ತಿಗಳೊಂದಿಗೆ ಕೈ ಜೋಡಿಸಿ ರೈತ ವಿರೋಧಿ ಕಾಯ್ದೆಗಳು ಹಾಗೂ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳು ಅಲ್ಲದೇ ಮಹಿಳೆಯರು, ದಲಿತರು ಹಾಗೂ ಎಲ್ಲ ಬಡವರ ವಿರೋಧಿಯಾದ ಲೂಟಿಕೋರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಸಂರಕ್ಷಣೆಗೆ ನಿಂತಿವೆ ಎಂದು ಆರೋಪಿಸಿದರು.
ಹಿಂದುತ್ವ ಮತಾಂಧ ಶಕ್ತಿಗಳು ಜನರನ್ನು ವಿಭಜಿಸಿ ಆಳುವ ಕಾರ್ಯವನ್ನು ಬಲಪಡಿಸಿವೆ. ಇದಕ್ಕೆ ಮುಸ್ಲಿಮ್ ಕೋಮುವಾದಿ ಶಕ್ತಿಗಳು ಕೈ ಜೋಡಿಸಿರುವುದು ಖೇದಕರ ಹಾಗೂ ಅಪಾಯಕಾರಿ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೋಮುವಾದ ಹರಡುವಿಕೆಗೆ ಮತ್ತು ಆ ಮೂಲಕ ಜನತೆಯ ನಿಜವಾದ ಪ್ರಶ್ನೆಗಳು ನೇಪತ್ಯಕ್ಕೆ ಸರಿಯುವಂತೆ ಮಾಡುವಲ್ಲಿ ಮತಾಂಧ ಶಕ್ತಿಗಳು ಶ್ರಮಿಸುತ್ತಿವೆ. ರಾಜ್ಯ ಸರಕಾರವೂ ಭಾರತದ ಸಂವಿಧಾನ ವಿರೋಧಿ ನಡೆಗಳನ್ನು ಜನತೆಯ ಪ್ರಜಾಪ್ರಭುತ್ವ ಹಾಗೂ ಬದುಕುವ ಹಕ್ಕುಗಳ ಮೇಲೆ ಧಾಳಿಯನ್ನು ಮುನ್ನಡೆಸಿದೆ. ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ - 2020 ಹಾಗೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ಸುಗ್ರೀವಾಜ್ಞೆ ಗಳನ್ನು ಈ ದಿಶೆಯಲ್ಲಿ ಗಮನಿಸಬಹುದು ಎಂದರು.
ಈಗ ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ಮುಗ್ಧ ಮಕ್ಕಳ ಮನಸ್ಸುಗಳ ಮೇಲೆ ಕೋಮುವಾದ ಹೇರುವ ತಂತ್ರಗಳನ್ನು ಹೆಣೆದಿವೆ. ನಾಡಿನ ಗಣ್ಯ ಸಾಹಿತಿಗಳು ಈ ಪರಿಷ್ಕರಣೆಯನ್ನು ತೀವ್ರವಾಗಿ ಪ್ರತಿರೋಧಿಸುತ್ತಿದ್ದಾರೆ. ಕವಿತ, ಪಠ್ಯಗಳಿಗೆ ತಮ್ಮ ಲೇಖನಗಳನ್ನು ಒದಗಿಸಿದ್ದ ಲೇಖಕರು ತಮ್ಮ ಕೊಡುಗೆಗಳನ್ನು ವಾಪಾಸು ಪಡೆದಿದ್ದಾರೆ. ಇಷ್ಟಾದರೂ, ಅವುಗಳನ್ನು ಪರಿಷ್ಕೃತ್ಯ ಪಠ್ಯವನ್ನು ವಾಪಾಸು ಪಡೆಯದಿರುವುದು ನಾಚಿಕೆಗೇಡಿನ ವಿಚಾರ ಎಂದು ಅವರು ಹೇಳಿದರು.
ಪಠ್ಯ ಪರಿಷ್ಕರಣೆ ಮಾಡಿರುವುದನ್ನು ಅನೇಕರು ನೋಡಿಯೇ ತಿಳಿದವರು ಮಾತನಾಡುತ್ತಿರುವುದು. ರೋಹಿತ್ ಚಕ್ರತೀರ್ಥ ತಜ್ಞ ಅಲ್ಲ. ಆತ ಫೇಸ್ ಬುಕ್, ವಾಟ್ಸ್ ಆ್ಯಪ್ ನಲ್ಲಿ ಮಾಡುವ, ವಿಮರ್ಶಿಸುವ ಮೂರನೇ ದರ್ಜೆಯ ರೀತಿಯ ಟೀಕೆ ಮಾಡುವವನನ್ನು ಸಮಿತಿಯ ಅಧ್ಯಕ್ಷನ ಸ್ಥಾನದಿಂದ ತೆರವುಗೊಳಿಸಲು ರಾಜ್ಯ ಸರಕಾರ ಮುಂದಾಗುತ್ತಿಲ್ಲ. ಇದು ಕೋಮುವಾದದ ಪ್ರಕ್ರಿಯೆಯನ್ನು ಬಲಪಡಿಸುವ ಆರೆಸ್ಸೆಸ್ ಅಜೆಂಡಾ ಜಾರಿಗೊಳಿಸುವ ಕುತಂತ್ರವಾಗಿದೆ. ಮಕ್ಕಳ ಭವಿಷ್ಯ, ರಾಜ್ಯದ ಸಮನ್ವಯತೆಯ ಪರಂಪರೆಯನ್ನು ನಾಶ ಮಾಡುವ ಈ ಕುತಂತ್ರದ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ್ ಉತ್ತರಿಸಿದರು.
ರಾಜ್ಯದ ಆಡಳಿತ ಕುಸಿದಿದೆ. ಕೃಷಿ ಕ್ಷೇತ್ರ ಕುಸಿದು ಬಿಕ್ಕಟ್ಟಿನ ಸ್ಥಿತಿ ಉಂಟಾಗಿದ್ದು, ಈ ಕ್ಷೇತ್ರವನ್ನು ಕಾರ್ಪೊರೇಟ್ ಕಪಿಮುಷ್ಠಿ ಗೊಳಪಡಿಸುವ ಎಲ್ಲ ಪ್ರಯತ್ನ ನಡೆಯುತ್ತಿದೆ. ಯುವಜನರ ಕೈಗೆ ಕೋಮುವಾದದ ಅಸ್ತ್ರ ನೀಡಿ ವಿಭಜನೆಗೆ ಪ್ರಯತ್ನ ಮಾಡುತ್ತಿದೆ ಎಂದು ಪ್ರಕಾಶ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಮುಖಂಡರಾದ ಸೈಯದ್ ಮುಜೀಬ್, ಬಿ.ಕೆ.ಇಮ್ತಿಯಾಝ್, ಸಂತೋಷ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.








