ಮಂಗಳೂರು ವಿವಿ ಕಾಲೇಜು | ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಮುಂದುವರಿದ ನಿರ್ಬಂಧ

File Photo
ಮಂಗಳೂರು, ಜೂ.2: ನಗರದ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಾಣಿಸಿಕೊಂಡ ಹಿಜಾಬ್ ವಿವಾದವು ಗುರುವಾರವೂ ಮುಂದುವರಿದಿದೆ. ಬುಧವಾರ ಹೆತ್ತವರ ಜೊತೆಗೂಡಿ ಬಂದು ಮನವಿ ಸಲ್ಲಿಸಿದ್ದ ಪದವಿ ವಿದ್ಯಾರ್ಥಿನಿಯರು ಇಂದು ಕಾಲೇಜಿಗೆ ಆಗಮಿಸಿದ್ದರು. ಅದರೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ತರಗತಿ ಪ್ರವೇಶಿಸಲು ಅವಕಾಶ ನಿರಾಕರಿಸಿದರು. ಹಾಗಾಗಿ ವಿದ್ಯಾರ್ಥಿನಿಯರು ತರಗತಿಯ ಹೊರಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ವಾರ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು. ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಹಿಜಾಬ್ ಪರ ಇದ್ದಾರೆ ಎಂದು ಆರೋಪಿಸಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘದ ನಾಯಕನ ರಾಜೀನಾಮೆಗೆ ಒತ್ತಾಯಿಸಿದ್ದರು. ಈ ಮಧ್ಯೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡದ ಕಾಲೇಜಿನ ಪ್ರಾಂಶುಪಾಲೆಯ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಬುಧವಾರ ವಿದ್ಯಾರ್ಥಿನಿಯರ ಪೋಷಕರು ಕಾಲೇಜಿನ ಪ್ರಾಂಶುಪಾಲೆಗೆ ಪತ್ರ ಬರೆದು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಗುರುವಾರ ಕಾಲೇಜಿಗೆ ವಿದ್ಯಾರ್ಥಿನಿಯರು ಆಗಮಿಸಿದ್ದರೂ ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಲು ನಿಕಾರಿಸಲಾಗಿದೆ.
ಹಾಗಾಗಿ ಸುಮಾರು 16 ವಿದ್ಯಾರ್ಥಿನಿಯರು ಕಾಲೇಜಿನ ಗ್ರಂಥಾಲಯದ ಬಳಿ ಕುಳಿತುಕೊಂಡಿದ್ದಾರೆ.