ಮಂಗಳೂರು: ರಕ್ತ ಚಂದನದ ಮರದ ತುಂಡುಗಳ ಅಕ್ರಮ ಸಾಗಾಟಕ್ಕೆ ಯತ್ನ; 7 ಮಂದಿಯ ಸೆರೆ
4.15 ಕೋ.ರೂ. ಮೌಲ್ಯದ ಸೊತ್ತುಗಳ ವಶ

ಮಂಗಳೂರು: ಮುಲ್ಕಿ ತಾಲೂಕಿನ ಕಿಲ್ಪಾಡಿ ಗ್ರಾಮದ ಕೆಂಚನಕೆರೆ ಎಂಬಲ್ಲಿ ಬುಧವಾರ ಸಂಜೆ ಮಂಗಳೂರು ಅರಣ್ಯ ಸಂಚಾರಿ ದಳದ ತಂಡವು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ರಕ್ತ ಚಂದನದ ಮರದ ತುಂಡುಗಳನ್ನು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ 7 ಮಂದಿಯನ್ನು ಬಂಧಿಸಿದೆ. ಆರೋಪಿಗಳಿಂದ 4.15 ಕೋ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಆಲಾಡಿ ರಾಜೇಶ್ ರೆಡ್ಡಿ, ಅನಿಲ್ ಕುಮಾರ್, ಪಾಲ್‌ರಾಜ್, ದಿನೇಶ್ ಕುಮಾರ್, ಕುಂಞಿ ಮುಹಮ್ಮದ್, ಅನಿಲ್ ಕುಮಾರ್, ಶಾಮೀರ್ ಎಸ್., ಎಂದು ಗುರುತಿಸಲಾಗಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಈಚರ್ ವಾಹನವೊಂದರಲ್ಲಿ ಹುಲ್ಲಿನ ಚೀಲಗಳಲ್ಲಿ ಮುಚ್ಚಿ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ತಂಡವು ದಾಳಿ ನಡೆಸಿ 8308.400 ಕೆ.ಜಿ ತೂಕದ ರಕ್ತ ಚಂದನ ಮರದ 316 ತುಂಡುಗಳನ್ನು ವಶಪಡಿಸಿಕೊಂಡಿತು. ಅಲ್ಲದೆ ಇದಕ್ಕೆ ಬೆಂಗಾವಲಾಗಿದ್ದ ಮಹೀಂದ್ರ ಮರಾಜೊ ವಾಹನವನ್ನು ವಶಪಡಿಸಲಾಗಿದೆ. ರಕ್ತಚಂದನ ಮರದ ತುಂಡುಗಳಲ್ಲದೆ ಎರಡೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.