ತಂದೆ ತನ್ನ ದುಡಿಮೆಯ ಸಂಬಳವನ್ನು ನನ್ನ ಶಿಕ್ಷಣಕ್ಕಾಗಿ ವ್ಯಯಿಸಿದ್ದರು: ಯುಪಿಎಸ್‌ಸಿ ಸಾಧಕ ಕಾರ್ಕಳದ ಶೌಕತ್ ಅಝೀಮ್

ಉಡುಪಿ, ಜೂ.2: ‘ನನ್ನ ತಂದೆ ಡ್ರೈವರ್ ವೃತ್ತಿ ಮಾಡುತ್ತಿದ್ದರು. ಅವರಿಗೆ ಕಡಿಮೆ ಸಂಬಳ ಸಿಗುತ್ತಿತ್ತು. ಆದರೂ ಅವರ ದುಡಿಮೆಯ ಸಂಬಳವನ್ನು ನನ್ನ ಶಿಕ್ಷಣಕ್ಕೆ ವ್ಯಯಿಸಿದರು. ಮನೆಯಲ್ಲಿ ತುಂಬಾ ಬಡತನ ಇದ್ದರೂ ಅವರೆಲ್ಲರ ಪ್ರೋತ್ಸಾಹ, ಸ್ಪೂರ್ತಿಯಿಂದ ನನಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು’ ಇದು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ)ದ 2021ನೆ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 545ನೇ ರ್ಯಾಂಕ್ ಗಳಿಸಿದ ಕಾರ್ಕಳ ಜರಿಗುಡ್ಡೆ ನಿವಾಸಿ ಶೇಖ್ ಅಬ್ದುಲ್ಲಾ ಹಾಗೂ ಮೈಮುನಾ ದಂಪತಿ ಪುತ್ರ ಮುಹಮ್ಮದ್ ಶೌಕತ್ ಅಝೀಮ್ ಅವರ ಮಾತುಗಳು.
‘ತಂಗಿಯ ಶಿಕ್ಷಣದ ಜವಾಬ್ದಾರಿ ಕೂಡ ತಂದೆಯ ಮೇಲಿತ್ತು. ಒಟ್ಟಾರೆ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿತ್ತು. ಕೋಚಿಂಗ್ ಸಂದರ್ಭದಲ್ಲಿ ರಾಜ್ಯ ಸರಕಾರ ನೀಡಿದ ಸ್ಟೈಫಂಡ್ ಪ್ರಯೋಜನಕ್ಕೆ ಬಂತು. ನಂತರ ತಂದೆಗೆ ದೊಡ್ಡ ಹೊರೆಯಾಗಿಯೇ ಇತ್ತು. ಆದರೂ ಅವರು ನನ್ನ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು’ ಎಂದರು.
ಸರಕಾರದಿಂದ ಉಚಿತ ಕೋಚಿಂಗ್ ಶಿಕ್ಷಣ ಮುಗಿದ ಬಳಿಕ ಒಂದು ವರ್ಷ ಬೆಂಗಳೂರಿನಲ್ಲಿ ಸರ್ವಿಸ್ ಇಂಜಿನಿಯರ್ ಆಗಿ ಕೆಲಸ ಮಾಡಿದೆ. ಆದರೆ ನನ್ನ ಮುಖ್ಯ ಗುರಿ ಯುಪಿಎಸ್‌ಸಿ ಪರೀಕ್ಷೆ ಬರೆಯುವುದಾಗಿತ್ತು. ಸರಕಾರದ ಯುಪಿಎಸ್‌ಸಿ ಪರೀಕ್ಷೆಗೆ ಉಚಿತ ತರಬೇತಿ ನೀಡುವ ಯೋಜನೆ ಅರ್ಜಿ ಹಾಕಿದೆ. ಈ ಆಯ್ಕೆಯ ಪರೀಕ್ಷೆಯಲ್ಲಿ ಮೂರನೆ ರ್ಯಾಂಕ್ ಪಡೆದು, ಸರಕಾರ ಸಂಪೂರ್ಣ ವೆಚ್ಚದಲ್ಲಿ ದೆಹಲಿಯ ಉತ್ತಮ ಸಂಸ್ಥೆಯಲ್ಲಿ ಕೋಚಿಂಗ್‌ಗೆ ಆಯ್ಕೆಯಾದೆ. ಅಲ್ಲಿಂದ ನಾನು ಪ್ರಯತ್ನ ಮುಂದುವರೆಸಿದೆ ಎಂದು ಶೌಕತ್ ಅಝೀಮ್ ತಿಳಿಸಿದರು.
‘ನಾನು ನನ್ನ ಸ್ನೇಹಿತರ ಜೊತೆ ಯುಪಿಎಸ್‌ಸಿ ಭವನಕ್ಕೆ ಹೋಗಿ ಫಲಿತಾಂಶ ನೋಡಿದೆ. ಪಟ್ಟಿಯಲ್ಲಿ ನನ್ನ ಹೆಸರು ನೋಡಿ ನನಗೆ ತುಂಬಾ ಖುಷಿ ಆಗಿತ್ತು. ತಕ್ಷಣ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆದರೆ ಮೊದಲು ತಾಯಿ ಇದನ್ನು ನಂಬಲೇ ಇಲ್ಲ. ಬಳಿಕ ಅವರು ಸಂತೋಷ ತಡೆದುಕೊಳ್ಳಲು ಆಗದೆ ಕಣ್ಣೀರು ಹಾಕಿದರು. ಏಳು ವರ್ಷಗಳ ಸತತ ಪ್ರಯತ್ನದಿಂದ ಅಂತಿಮವಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಇದು ನನ್ನ ಏಳನೇ ಪ್ರಯತ್ನ ಆಗಿತ್ತು. ಎರಡನೇ ಪರ್ಸನಾಲಿಟಿ ಟೆಸ್ಟ್ ಆಗಿತ್ತು. ಕಳೆದ ವರ್ಷ ನಾನು ಲಿಖಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ಅಂತಿಮವಾಗಿ ಆಯ್ಕೆ ಆಗಿರಲಿಲ್ಲ. ಅದಕ್ಕೆ ಈ ವರ್ಷ ನಾನು ಲಿಖಿತ ಪರೀಕ್ಷೆ ಮೇಲೆ ಸಾಕಷ್ಟು ಶ್ರಮ ವಹಿಸಿದೆ. ಈ ವರ್ಷ ನಾನು ಐಎಎಸ್ ಅಧಿಕಾರಿ ಆಗುವಷ್ಟು ರ್ಯಾಂಕ್ ಬರಬಹುದು ಎಂಬ ನಿರೀಕ್ಷೆ ಇತ್ತು’ ಎಂದು ಅವರು ಹೇಳಿದರು.
"ನಂಬಿಕೆ ಮೂಡಿಸಿದ ಶಿಕ್ಷಕರು"
ನನ್ನ ಈ ಸಾಧನೆಗೆ ಮುಖ್ಯವಾಗಿ ನನ್ನ ಹೆತ್ತವರೇ ಸ್ಪೂರ್ತಿ. ಅದೇ ರೀತಿ ನನ್ನ ಶಿಕ್ಷಕರು ಮತ್ತು ಉಪನ್ಯಾಸಕರು ನನ್ನಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡಿದರು. ಇವರೆಲ್ಲರ ಪ್ರೋತ್ಸಾಹದಿಂದ ನನಗೆ ಪರೀಕ್ಷೆ ಬರೆಯುವ ನಂಬಿಕೆ ಮೂಡಿತು. ಅಲ್ಲದೆ ಕಾರ್ಕಳ ಜನತೆಯ ಆಶೀರ್ವಾದ ನನ್ನ ಮೇಲೆ ಸದಾ ಇದೆ. ಸಮಾಜ ಸೇವೆ ಮಾಡುವುದು ನನ್ನ ಕಸನು ಆಗಿತ್ತು. ಆ ಕಾರಣದಿಂದಲೇ ನಾಗರಿಕಾ ಸೇವಾ ಪರೀಕ್ಷೆ ಬರೆಯಲು ಹೆಜ್ಜೆ ಇಟ್ಟೆ ಎಂದು ಅವರು ಹೇಳಿದರು.
ಯುಪಿಎಸ್‌ಸಿ ಇಡೀ ವಿಶ್ವದಲ್ಲಿಯೇ ತುಂಬಾ ಕಷ್ಟದ ಪರೀಕ್ಷೆ ಎಂದು ಹೇಳುತ್ತಾರೆ. ಇದಕ್ಕೆ ಕೋಚಿಂಗ್ ಬೇಕೆಬೇಕು ಎಂದು ಹೇಳುತ್ತಾರೆ. ನಾನು ಮೊದಲ ಎರಡು ವರ್ಷ ಯಾವುದೇ ಕೋಂಚಿಂಗ್ ಇಲ್ಲದೆ ಮನೆಯಲ್ಲೇ ಓದಿ ತಯಾರಿ ಮಾಡಿದೆ. ಆದರೆ ಪ್ರಾಥಮಿಕವಾಗಿಯೂ ಆಯ್ಕೆ ಆಗುತ್ತಿರಲಿಲ್ಲ. ಬಳಿಕ ರಾಜ್ಯ ಸಕಾಕರ ಉಚಿತ ಯೋಜನೆಯಲ್ಲಿ ಒಂದು ವರ್ಷಗಳ ಕಾಲ ದೆಹಲಿಯಲ್ಲಿ ಕೋಚಿಂಗ್ ಪಡೆದುಕೊಂಡೆ ಎಂದು ಅವರು ತಿಳಿಸಿದರು.
‘ರ್ಯಾಂಕ್ ಉತ್ತಮಗೊಳಿಸಲು ಪರೀಕ್ಷೆ ಬರೆಯುವೆ’
ಈಗ ಸಿಕ್ಕಿರುವ 545 ರ್ಯಾಂಕ್‌ನಲ್ಲಿ ಭಾರತೀಯ ಆಡಳಿತ್ಮಾಕ ಸೇವೆ ಸಿಗುವುದು ತುಂಬಾ ಕಷ್ಟ. ನನ್ನ ಗುರಿ ಐಎಎಸ್ ಅಧಿಕಾರಿ ಆಗುವುದು. ರ್ಯಾಂಕ್ ಉತ್ತಮ ಗೊಳಿಸಲು ಈ ಬಾರಿ ಮತ್ತೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದೇನೆ. ಈ ಮಧ್ಯೆ ಕರ್ತವ್ಯಕ್ಕೂ ಹಾಜರಾಗುತ್ತೇನೆ. ನಾನು ಕರ್ತವ್ಯಕ್ಕೆ ಹಾಜರಾಗುವುದು ವಿಳಂಬ ಮಾಡಿದರೆ ಸರಕಾರಕ್ಕೆ ನಷ್ಟ ಆಗುತ್ತದೆ. ಅದರ ಜೊತೆ ಮುಂದಿನ ಪರೀಕ್ಷೆಗೂ ತಯಾರಿ ಮಾಡುತ್ತೇನೆ ಎಂದು ಶೌಕತ್ ಅಝೀಮ್ ತಿಳಿಸಿದರು.
ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಅವರ ಸಬಲೀಕರಣ ಮಾಡು ವುದು ನನ್ನ ಆದ್ಯತೆ ಆಗಿದೆ. ಅದೇ ರೀತಿ ಯುವಜನತೆಗೆ ಸರಕಾರದ ಯೋಜನೆ ಗಳ ಬಗ್ಗೆ ಮಾಹಿತಿ ನೀಡಿ ಅವರ ಸಬಲೀಕರಣ ಮಾಡುವುದು ಕೂಡ ನನ್ನ ಉದ್ದೇಶವಾಗಿದೆ ಎಂದ ಅವರು, ಮುಸ್ಲಿಮ್ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಕೇಂದ್ರ ಅಲ್ಪಸಂಖ್ಯಾತ ಇಲಾಖೆಯಲ್ಲಿರುವ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆದರೆ ನಮ್ಮ ಸಮುದಾಯಕ್ಕೆ ಆ ಬಗ್ಗೆ ಜಾಗೃತಿ ಇಲ್ಲ. ಅದನ್ನು ನೀಡುವ ಕಾರ್ಯ ಅಗತ್ಯವಾಗಿ ಆಗಬೇಕು ಎಂದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹೇಳಿದಂತೆ ಕನಸು ಕಾಣಬೇಕು. ಯಾವುದೇ ಕನಸು ಆಗಿರಲಿ, ಎಷ್ಟೆ ಕಷ್ಟ ಬಂದರೂ ಅದರ ಹಿಂದೆ ಹೋಗಿ ಪ್ರಯತ್ನ ಪಟ್ಟರೆ ನನಸು ಮಾಡಲು ಸಾಧ್ಯವಾಗುತ್ತದೆ. ದೇಶ ಸೇವೆ ಮಾಡಲು ಈ ಕ್ಷೇತ್ರ ಅತ್ಯುತ್ತಮವಾದ ವೇದಿಕೆ ಆಗಿದೆ. ಆದುದರಿಂದ ಈ ಅವಕಾಶವನ್ನು ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು. ಮುಖ್ಯವಾಗಿ ನನ್ನ ಊರಿನ ಯುವಜನತೆ ಈ ಕ್ಷೇತ್ರಕ್ಕೆ ಹೆಚ್ಚು ಬರಬೇಕು. ಯುವಜನತೆಯಿಂದ ಮಾತ್ರ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಬಹುದು.
-ಮುಹಮ್ಮದ್ ಶೌಕತ್ ಅಝೀಮ್
ನನ್ನ ಮಗನಿಗೆ ಸಮಾಜ ಸೇವೆ ಮತ್ತು ದೇಶ ಸೇವೆ ಮಾಡಬೇಕೆಂಬ ದೊಡ್ಡ ಕನಸು ಇತ್ತು. ಅದಕ್ಕಾಗಿ ಅವನು ನಿರಂತರವಾಗಿ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾನೆ. ಪಟ್ಟಿಯಲ್ಲಿ ಹೆಸರು ನೋಡಿದ ಕೂಡಲೇ ನನಗೆ ಕರೆ ಮಾಡಿ ತಿಳಿಸಿದನು. ಅದನ್ನು ಕೇಳಿ ಖುಷಿ ಆಗಿ, ಕಣ್ಣಲ್ಲಿ ನೀರು ಬಂತು. ಮನೆಯಲ್ಲಿ ಬಡತನ ಇದ್ದರೂ ಮಗನ ಶಿಕ್ಷಣಕ್ಕೆ ನಾವು ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದ್ದೇವೆ. ಮುಂದೆ ಅವನು ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’
-ಮೈಮುನಾ, ಶೌಕತ್ ಅಝೀಮ್‌ರ ತಾಯಿ