'ರಾಘವೇಂದ್ರ ಶೆಟ್ಟಿಯಿಂದ ಆ್ಯಸಿಡ್ ಬೆದರಿಕೆʼ: ರೂಪಾ ಮೌದ್ಗಿಲ್ ವಾಟ್ಸಪ್ ಸಂದೇಶ ವೈರಲ್

ರೂಪಾ ಮೌದ್ಗಿಲ್
ಬೆಂಗಳೂರು: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ಎಂಡಿ ರೂಪಾ ಮೌದ್ಗಿಲ್ IPS ನಡುವಿನ ಜಟಾಪಟಿ ತೀವ್ರ ಸ್ವರೂಪ ಪಡೆಯುತ್ತಿದೆ. ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಸುದೀರ್ಘ ಆರೋಪ ಮಾಡಿದ್ದ ರೂಪಾ ಮೌದ್ಗಿಲ್, 6 ಪುಟಗಳ ದೂರಿನ ವರದಿ ಸಲ್ಲಿಸಿದ್ದರು. ಇದಾದ ಬಳಿಕ ಸ್ಪಷ್ಟನೆ ನೀಡಿದ್ದ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಗಳನ್ನು ತಳ್ಳಿ ಹಾಕಿ ರೂಪಾ ವಿರುದ್ಧವೇ ಪ್ರತ್ಯಾರೋಪ ಮಾಡಿದ್ದರು.
ಇದರ ನಡುವೆ, ಮೇ 27 ರಂದು ನಡೆದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವಾರ್ಷಿಕ ಸಭೆಯಲ್ಲಿ ರಾಘವೇಂದ್ರ ಶೆಟ್ಟಿ ಹಾಗೂ ರೂಪಾ ಮೌದ್ಗಿಲ್ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸಭೆಯಲ್ಲಿ ನಡೆದ ಜಟಾಪಟಿಯಲ್ಲಿ ರಾಘವೇಂದ್ರ ಶೆಟ್ಟಿ ಅವರು, ʼತಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೇ ರೂಪಾ ಅವರೇ ಕಾರಣʼ ಎಂದು ಹೇಳುವುದು ಕಂಡು ಬಂದಿದೆ.
ಇದೀಗ, ರೂಪಾ ಮೌದ್ಗಿಲ್ ಅವರ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ʼತಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರೇ ರೂಪಾ ಅವರೇ ಕಾರಣ, ಎಂದು ಹೇಳುವ ಮೂಲಕ ಆತ್ಮಹತ್ಯೆ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ನನ್ನ ಮುಖಕ್ಕೆ ಆಸಿಡ್ ಎರಚಿಸುವ ಧಮ್ಕಿ ಕೂಡಾ ಹಾಕಿದ್ದಾರೆʼ ಎಂದು ಗಂಭೀರ ಆರೋಪ ಹೊರಿಸಲಾಗಿದೆ.
'ಆತ್ಮಹತ್ಯೆಯ ಬೆದರಿಕೆ ಒಡ್ಡುವುದು ಐಪಿಸಿ ಪ್ರಕಾರ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಕೇಸ್ ಹಾಕಲು ಅನುಮತಿ ಕೊಡಬೇಕೆಂದು ನಾನು 6 ಪುಟಗಳ ವರದಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಕೋರಿದ್ದೇನೆ. ಸರಕಾರಕ್ಕೆ ಮುಜುಗರ ಆಗಬಾರದೆಂದು ಆತ್ಮಹತ್ಯೆಯ ಬೆದರಿಕೆ ಹಾಗೂ ಆಸಿಡ್ ದಾಳಿ ಬೆದರಿಕೆ ಬಗ್ಗೆ ನಾನು ಎಲ್ಲಿಯೂ ಹೇಳಿರಲಿಲ್ಲʼ ಎಂದು ರೂಪಾ ಅವರ ವಾಟ್ಸಪ್ ಸಂದೇಶದಲ್ಲಿ ಬರೆಯಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರೂಪಾ ಮೌದ್ಗಿಲ್ ಅವರನ್ನು ʼವಾರ್ತಾಭಾರತಿʼ ಸಂಪರ್ಕಿಸಿದ್ದು, ವೈರಲ್ ಆಗುತ್ತಿರುವ ವಾಟ್ಸಪ್ ಸಂದೇಶ ತನ್ನದೇ ಎಂದು ರೂಪಾ ಮೌದ್ಗಿಲ್ ಅವರು ಖಚಿತ ಪಡಿಸಿದ್ದಾರೆ.
ವೈರಲ್ ಆಗುತ್ತಿರುವ ರೂಪಾ ಮೌದ್ಗಿಲ್ ವಾಟ್ಸಪ್ ಸಂದೇಶ








