ಸಚಿವ ಬಿ.ಸಿ. ನಾಗೇಶ್ ಹೇಳಿಕೆ ದಬ್ಬಾಳಿಕೆಯ ಧೋರಣೆ: ಸಾಹಿತಿ ದೇವನೂರು ಮಹಾದೇವ

ಬೆಂಗಳೂರು, ಜೂ.2: ಪಠ್ಯಪುಸ್ತಕದಲ್ಲಿ ನನ್ನ ಪಠ್ಯವನ್ನು ಕೈ ಬಿಡಬೇಕು ಎಂದು ಅಧಿಕೃತವಾಗಿ ಶಿಕ್ಷಣ ಸಚಿವರಿಗೆ ಹಾಗೂ ಶಿಕ್ಷಣ ಇಲಾಖೆಗೆ ತಿಳಿಸಿದ್ದರೂ, ಪರಿಷ್ಕೃತ ಮುದ್ರಣವೇ ಜಾರಿಗೆ ಬರುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಅವರ ಈ ಧೋರಣೆ ದಬ್ಬಾಳಿಕೆ ಎನಿಸುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಅವರು ಆಕ್ಷೇಪಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ಅವರು ಪತ್ರ ಬರೆದಿದ್ದು, ಚಾತುವರ್ಣ ವಿರೋಧಿ ಬಸವಣ್ಣ ಅವರ ಪಾಠವನ್ನು ಪರಿಷ್ಕರಣಾ ಸಮಿತಿಯು ಕತ್ತು ಹಿಸುಕಿರುವುದೂ ಅಲ್ಲದೆ, ಕುವೆಂಪು, ಅಂಬೇಡ್ಕರ್ ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನು ಮಕ್ಕಳ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿ ಮಾಡಲಾಗಿದೆ.
ಹಾಗೆಯೇ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಧ್ವಜದ ಬಗ್ಗೆ ದನಿ ಎತ್ತಿದ ಸಂದರ್ಭದಲ್ಲಿ ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ಇದನ್ನು ವಿರೋಧಿಸಿದರೆ, ವಿರೋಧಿಸಿದವರ ಭಿನ್ನಾಭಿಪ್ರಾಯಗಳನ್ನು ‘ಟೂಲ್‍ಕಿಟ್’ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ಯತ್ನಿಸುವುದು ನಾಡಿಗೆ ಕೇಡಿನ ಲಕ್ಷಣಗಳು ಎಂದು ಎಚ್ಚರಿಕೆ ನೀಡಿದ್ದಾರೆ.
ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು ಹಿಂದಿನ ಪಠ್ಯವನ್ನು ಮುಂದುವರೆಸುವಂತೆ ಕೇಳಿಕೊಂಡರೂ ಶಿಕ್ಷಣ ಇಲಾಖೆಯು ಅವರ ಮನವಿಯನ್ನು ಕಾಲುಕಸ ಮಾಡಿ ಲೆಕ್ಕಿಸದಿರುವುದು ಖಂಡನೀಯ. ಹಾಗಾಗಿ ವಿವಾದಗಳನ್ನು ಮುಂದುವರೆಸದಂತೆ ಶಿಕ್ಷಣ ಇಲಾಖೆಗೆ ಸಾಹಿತಿ ದೇವನೂರ ಮಹಾದೇವ ಅವರು ಮನವಿ ಮಾಡಿದ್ದಾರೆ.







