ಎಸ್ಸಿಎಸ್ಟಿ ಆಯೋಗದಲ್ಲಿ ಭ್ರಷ್ಟಾಚಾರ ಆರೋಪ: ಕ್ರಮ ವಹಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ

ಬೆಂಗಳೂರು, ಜೂ. 2: ಎಸ್ಸಿಎಸ್ಟಿ ಆಯೋಗದಲ್ಲಿ ಅಧ್ಯಕ್ಷ, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇವರನ್ನು ವಜಾ ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಕೀಲರ ಒಕ್ಕೂಟ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಒಕ್ಕೂಟ ಅಧ್ಯಕ್ಷ ಎಸ್.ಬಿ ಸುರೇಶ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯಗಳ ಭದ್ರತೆಗಾಗಿ ಆಯೋಗವನ್ನು ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಮೇಲ್ಜಾತಿಯವರು ಪರಿಶಿಷ್ಟ ಸಮುದಾಯಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಸಾಮಾಜಿಕ ಬಹಿಷ್ಕಾರ, ಕೊಲೆ ಸುಲಿಗೆ, ಅತ್ಯಾಚಾರ, ಜಾತಿ ನಿಂದನೆ, ಆಸ್ತಿ-ಪಾಸ್ತಿ ನಾಶ ಇತರೆ ಎಲ್ಲಾ ವಿಧವಾದ ಅನ್ಯಾಯಗಳನ್ನು ಮಾಡಿದರೆ, ಆಯೋಗವು ಅವರ ವಿರುದ್ಧ ಕ್ರಮ ಜರುಗಿಸಿ, ನೊಂದವರಿಗೆ ರಕ್ಷಣೆ ನೀಡಬೇಕಾಗುತ್ತದೆ. ಆದರೆ ಆಯೋಗವು ತನ್ನ ಕರ್ತವ್ಯವನ್ನು ಮರೆತು ಭ್ರಷ್ಟಾಚಾರದಲ್ಲಿ ತೊಡಗಿದೆ. ಹಾಗಾಗಿ ಇದನ್ನು ತಡೆಯಲು ಶುಕ್ರವಾರ ಎಸ್ಸಿಎಸ್ಟಿ ಆಯೋಗದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದರು.
ಎಸ್ಸಿಎಸ್ಟಿ ಆಯೋಗ ಆಯೋಗಕ್ಕೆ ಅಧ್ಯಕ್ಷರನ್ನಾಗಿ ನುರಿತ ವಕೀಲರನ್ನೇ ನೇಮಕ ಮಾಡಬೇಕು, ಅವರಿಗೆ ಕನಿಷ್ಠ 10 ವರ್ಷ ಅನುಭವದ ಹಿರಿತನವಿರಬೇಕು ಎಂದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆರ್. ತಿಪ್ಪೇಸ್ವಾಮಿ, ಮುತ್ಯಾಲಪ್ಪ, ಚಿಕ್ಕ ತಿಮ್ಮರಾಯಪ್ಪ ಉಪಸ್ಥಿತರಿದ್ದರು.
ಹಿಂದುಳಿದ ವರ್ಗಗಳ ಆಯೋಗ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಇತರೆ ಆಯೋಗಗಳು ಯಾವುದೇ ಸರಕಾರ ಬಂದರೂ ನುರಿತ ವೃತ್ತಿಪರ ವಕೀಲರನ್ನು ನೇಮಿಸುತ್ತಾರೆ. ಆದರೆ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ತುಳಿಯಲು, ರಾಜಕೀಯ ಹಿನ್ನೆಲೆಯವರನ್ನು, ಅಧ್ಯಕ್ಷ, ಸದಸ್ಯರನ್ನಾಗಿ ನೇಮಿಸಿ ಆಯೋಗದ ಪರಮಾಧಿಕಾರವನ್ನು ನಾಶ ಮಾಡುತ್ತದೆ.
-ಭಕ್ತವತ್ಸಲ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಕೀಲರ ಒಕ್ಕೂಟದ ಗೌರವಾಧ್ಯಕ್ಷ







