‘ಮುಂಗಾರು’ ಎದುರಿಸಲು ಸಜ್ಜುಗೊಂಡ ಕೊಂಕಣ ರೈಲ್ವೆ

ಸಾಂದರ್ಭಿಕ ಚಿತ್ರ
ಉಡುಪಿ, ಜೂ.2: ಮುಂಗಾರು ಕರ್ನಾಟಕದ ಕರಾವಳಿಗೆ ಪ್ರವೇಶಿಸಲು ಸಿದ್ಧವಾಗಿರುವಂತೆಯೇ ಇದರಿಂದ ಉಂಟಾಗುವ ವಿವಿಧ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಕೊಂಕಣ ರೈಲ್ವೆ ಸಹ ಸಜ್ಜಾಗಿದೆ. ಕೊಂಕಣ ರೈಲ್ವೆಯ 740ಕಿ.ಮೀ. ಮಾರ್ಗದುದ್ದಕ್ಕೂ ಅನೇಕ ಸುರಕ್ಷತಾ ಕ್ರಮಗಳ ಯೋಜನೆಯನ್ನು ಅದು ಪೂರ್ಣಗೊಳಿಸಿದೆ.
ಕೇಂದ್ರ ರೈಲ್ವೆಗೆ ಸೇರಿದ ರೋಹಾದಿಂದ ಸ್ವಲ್ಪ ಮುಂದಿನ ಕೊಲಾಡ್ನಿಂದ ಮಂಗಳೂರು ನಿಲ್ದಾಣದಿಂದ ಸ್ವಲ್ಪ ಹಿಂದಿರುವ ತೋಕೂರುವರೆಗಿನ ಮಾರ್ಗ ಕೊಂಕಣ ರೈಲ್ವೆ ಅಡಿಯಲ್ಲಿ ಬರುತ್ತದೆ. ಈ ಮಾರ್ಗದಲ್ಲಿ ಮಳೆಗಾಲದ ಸಮಯದಲ್ಲಿ ಭೂಕುಸಿತ, ಗುಡ್ಡ ಜರಿಯುವುದು, ಬಂಡೆ ಹಳಿಗೆ ಬಡಿಯುವುದು, ಸುರಂಗದಲ್ಲಿ ತಡೆಯುಂಟಾಗುವುದು ಸರ್ವೆಸಾಮಾನ್ಯ ಎನಿಸಿಕೊಂಡಿದೆ.
ಈ ಬಾರಿ ಇಂಥ ಎಲ್ಲಾ ಸಮಸ್ಯೆಗಳ ಕುರಿತು ಮೊದಲೇ ಯೋಚಿಸಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಅವುಗಳನ್ನು ಸ್ವಚ್ಛಗೊಳಿಸುವ ಹಾಗೂ ಮರಗಳ ಗೆಲ್ಲುಗಳನ್ನು ಕಡಿಯಲಾಗಿದೆ ಎಂದು ಕೊಂಕಣ ರೈಲ್ವೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಭೂಕುಸಿತ, ಮಣ್ಣು ಕುಸಿಯುವ ಸಾಧ್ಯತೆ ಇರುವ ಜಾಗಗಳನ್ನು ಗುರುತಿಸಿ ಅಲ್ಲಿ ಮಣ್ಣು ಕುಸಿಯದಂತೆ ಅವುಗಳನ್ನು ಸಮತಟ್ಟುಗೊಳಿಸಲಾಗಿದೆ. ಬಂಡೆಗಳು ಜಾರದಂತೆ ತಡೆ ಹಾಕಲಾಗಿದೆ. ಕಳೆದ ಹತ್ತು ವರ್ಷಗಳಿಂದ ಸತತವಾಗಿ ಕೈಗೊಂಡ ಕ್ರಮಗಳಿಂದ ಈಗ ರೈಲ್ವೆ ಹಳಿಗಳ ಮೇಲೆ ಬಂಡೆ ಕುಸಿಯುವ ಅಥವಾ ಭೂಕುಸಿತದ ಪ್ರಕರಣ ಭಾರೀ ಕಡಿಮೆಯಾಗಿದೆ. ಹೀಗಾಗಿ ಕಳೆದ ವರ್ಷ ಮಳೆಗಾಲದ ಸಮಯದಲ್ಲಿ ಈ ಮಾರ್ಗದಲ್ಲಿ ಸಂಚಾರಕ್ಕೆ ಹೆಚ್ಚು ತೊಂದರೆಯಾಗಿರಲಿಲ್ಲ ಎಂದು ಹೇಳಿಕೆ ತಿಳಿಸಿದೆ.
ಮಳೆಗಾಲದ ಸಮಯದಲ್ಲಿ ಕೊಂಕಣ ರೈಲ್ವೆ ದಿನದ 24 ಗಂಟೆಗಳ ಕಾಲವೂ ಹಳಿಗಳುದ್ದಕ್ಕೂ ‘ಮಾನ್ಸೂನ್ ಪೆಟ್ರೋಲಿಂಗ್’ (ಮಳೆಗಾಲದ ಗಸ್ತು) ನಡೆಸುತ್ತಿದೆ. ಕೊಲಾಡ್ನಿಂದ ತೋಕೂರುವರೆಗಿನ ಹಳಿಗಳ ಕಾಯುವಿಕೆಗೆ ಸುಮಾರು 846 ಮಂದಿ ಗಾರ್ಡ್ಗಳನ್ನು ನೇಮಿಸಲಾಗುತ್ತದೆ. ಅಪಾಯದ ಶಂಕೆ ಇರುವ ಜಾಗದಲ್ಲಿ 24 ಗಂಟೆಯೂ ವಾಚ್ಮನ್ ಕಾಯುವ ವ್ಯವಸ್ಥೆ ಇದೆ.
ಕೊಂಕಣ ರೈಲ್ವೆ ಪ್ರದೇಶಗಳಲ್ಲಿ ಜೋರಾಗಿ ಮಳೆ ಸುರಿಯುತಿದ್ದು, ದೂರದ ವೀಕ್ಷಣೆ ಕಷ್ಟವೆನಿಸಿದರೆ ರೈಲುಗಳನ್ನು ಗರಿಷ್ಠ 40ಕಿ.ಮೀ. ವೇಗದಲ್ಲಿ ಓಡಿಸುವಂತೆ ಪೈಲಟ್ಗಳಿಗೆ ಸೂಚನೆಗಳನ್ನು ನೀಡಲಾಗಿದೆ. ರತ್ನಗಿರಿ ಮತ್ತು ವರ್ನೆ ನಿಲ್ದಾಣ ಗಳಲ್ಲಿ ತುರ್ತು ವೈದ್ಯಕೀಯ ಸಾಮಗ್ರಿ ಹಾಗೂ ತಾತ್ಕಾಲಿಕ ಆಪರೇಷನ್ ಥಿಯೇಟರ್ನ್ನು ಒಳಗೊಂಡ ಅಪಘಾತ ಪರಿಹಾರ ವೈದ್ಯಕೀಯ ವಾಹನ (ಎಆರ್ಎಂವಿ)ವನ್ನು ಸಜ್ಜಾಗಿರಿಸಲಾಗಿದೆ. ಅಲ್ಲದೇ ವರ್ನೆಯಲ್ಲಿ ಆ್ಯಕ್ಸಿಡಿಂಟ್ ರಿಲೀಫ್ ಟ್ರೈನ್ನ್ನು ಸನ್ನದ್ಧವಾಗಿರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಕೊಂಕಣ ರೈಲ್ವೆ ವತಿಯಿಂದ ಸ್ಟೇಶನ್ ಮಾಸ್ಟರ್ಸ್ಗಳಿಗೆ, ಲೋಕೊ ಪೈಲೆಟ್ಗಳಿಗೆ ಹಾಗೂ ಇತರ ಸ್ಥಳೀಯ ಅಧಿಕಾರಿಗಳಿಗೆ ಮೊಬೈಲ್ ಫೋನ್ ಗಳನ್ನು ನೀಡಲಾಗಿದೆ. ಅಲ್ಲದೇ ಗಾರ್ಡ್ಗಳಿಗೆ ಮತ್ತು ಲೋಕೊ ಪೈಲೆಟ್ಗಳಿಗೆ ವಾಕಿ-ಟಾಕಿ ಸಹ ನೀಡಲಾಗಿದೆ. ಅಲ್ಲದೇ ಸ್ಟೇಶನ್ಗಳ ಮಧ್ಯೆ ವಯರ್ಲೆಸ್ ಸಂದೇಶಕ್ಕೂ ವ್ಯವಸ್ಥೆ ಮಾಡಲಾಗಿದೆ. ಸೆಟಲೈಟ್ ಫೋನ್ ಸಂಪರ್ಕವನ್ನು ಒದಗಿಸಲಾಗಿದೆ. ಈ ಮೂಲಕ ನೇರವಾಗಿ ಪ್ರಧಾನ ಕಚೇರಿಯ ಕಂಟ್ರೋಲ್ ರೂಮನ್ನು ಸಂಪರ್ಕಿಸಬಹುದಾಗಿದೆ.
ಕೊಂಕಣ ರೈಲ್ವೆ ಮಾರ್ಗದ ಒಂಭತ್ತು ನಿಲ್ದಾಣಗಳಲ್ಲಿ-ಚಿಪ್ಳುಣ್, ರತ್ನಗಿರಿ, ವಿವಾಡೆ, ಕನಕವಾಲಿ, ಮಡಗಾಂವ್, ಕಾರವಾರ, ಭಟ್ಕಳ ಹಾಗೂ ಉಡುಪಿಗಳಲ್ಲಿ ಸ್ವಯಂ ಆಗಿ ಮಳೆಯ ಪ್ರಮಾಣವನ್ನು ಲೆಕ್ಕಹಾಕುವ ಯಂತ್ರವನ್ನು ಅಳವಡಿಸಲಾಗಿದೆ. ಇದು ಆ ಪ್ರದೇಶಗಳಲ್ಲಿ ಬೀಳುವ ಮಳೆಯ ಪ್ರಮಾಣವನ್ನು ಅಂದಾಜಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ.
ಅದೇ ರೀತಿ ಪ್ರವಾಹ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಮೂರು ಸೇತುವೆಗಳಿಗೆ -ಕಾಳಿ ನದಿ(ವೀರ್-ಮಂಗಾವ್ ನಡುವೆ), ಸಾವಿತ್ರಿ ನದಿ (ವೀರ್-ಸಪೆ ವಾಮನೆ) ಹಾಗೂ ವಶಿಷ್ಟ ನದಿ (ಚಿಫ್ಳುಣ್-ಕಮಟೆ ನಡುವೆ)- ಒದಗಿಸಲಾಗಿದೆ. ಇದು ನದಿಯಲ್ಲಿ ನೀರಿನ ಹರಿಯುವಿಕೆ ಅಪಾಯದ ಮಟ್ಟವನ್ನು ತಲುಪಿದಾಕ್ಷಣ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತದೆ.
ಗಾಳಿಯ ವೇಗವನ್ನು ಅಂದಾಜಿಸಲು ಅನಿಮೋಮೀಟರ್ನ್ನು ನಾಲ್ಕು ಕಡೆಗಳಲ್ಲಿ -ಪನ್ವೇಲ್, ಮಾಂಡೋವಿ ಸೇತುವೆ, ಜುವಾರಿ ಸೇತುವೆ ಹಾಗೂ ಶರಾವತಿ ಸೇತುವೆ (ಹೊನ್ನಾವರ-ಮಂಕಿ ನಡುವೆ) ಬಳಿ ಅಳವಡಿಸಲಾಗಿದೆ.
ಮೂರು ಕಂಟ್ರೋಲ್ ರೂಮುಗಳನ್ನು ಬೇಲಾಪುರ, ರತ್ನಗಿರಿ ಹಾಗೂ ಮಡಗಾಂವ್ಗಳಲ್ಲಿ ತೆರೆಯಲಾಗಿದ್ದು, ಇವು ಮಳೆಗಾಲದ ಅವಧಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತವೆ. ಪ್ರಯಾಣಿಕರು ರೈಲುಗಳ ಕುರಿತ ಮಾಹಿತಿಗಾಗಿ ‘139’ ಅಥವಾ ಕೊಂಕಣ ರೈಲ್ವೆಯ ಟೋಲ್ಫ್ರೀ ನಂ. ಆದ 18002331332ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕೊಂಕಣ ರೈಲುಗಳ ಮಾನ್ಸೂನ್ ವೇಳಾ ಪಟ್ಟಿ ಜೂ.10ರಿಂದ ಅಕ್ಟೋಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಈ ವೇಳೆ ಕೊಂಕಣ ರೈಲುಗಳಲ್ಲಿ ಪ್ರಯಾಣಿ ಸುವ ಪ್ರಯಾಣಿಕರು ರೈಲುಗಳ ಬದಲಾದ ಬರುವ ಮತ್ತು ಹೋಗುವ ಸಮಯಗಳನ್ನು ಸರಿಯಾಗಿ ಗಮನಿಸುವಂತೆ ಹೇಳಿಕೆಯಲ್ಲಿ ಕೋರಲಾಗಿದೆ.