ಪಠ್ಯದಲ್ಲಿ ಬಸವಣ್ಣನವರ ಮೂಲ ಸಿದ್ಧಾಂತವನ್ನು ತಿರುಚಿ ಸತ್ಯವನ್ನು ಮರೆಮಾಚಲಾಗುತ್ತಿದೆ: ಹೊಸಮಠ ಚಿದಾನಂದ ಸ್ವಾಮೀಜಿ

ಮೈಸೂರು,ಜೂ.2: ಪರಿಷ್ಕೃತ ಶಾಲಾ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಇತಿಹಾಸವನ್ನು ತಿರುಚಿರುವುದು ಖಂಡನೀಯ ಎಂದು ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಹೊಸಮಠದ ಆವರಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವಣ್ಣನವರ ಮೂಲ ಸಿದ್ಧಾಂತವನ್ನು ತಿರುಚಿ ಸತ್ಯವನ್ನು ಮರೆಮಾಚಲಾಗುತ್ತಿದೆ. ಮಕ್ಕಳ ಮನಸ್ಸಿನಲ್ಲಿ ತಪ್ಪು ಮಾಹಿತಿ ಬಿತ್ತುವುದು ಸರಿಯಲ್ಲ. ಆದ್ದರಿಂದ ಮೂಲ ಚರಿತ್ರೆಯನ್ನೇ ತಿಳಿಸುವ ಹಳೇ ಪಠ್ಯಕ್ರಮವನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಬ್ರಾಹ್ಮಣೀಕರ ವ್ಯಾಪಕರವಾಗಿ ಆಗುತ್ತಿದೆ. ಎಲ್ಲ ವರ್ಗದಲ್ಲೂ ಇದು ಹೈಲೆಟ್ ಮಾಡುತ್ತಾ ಇದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಇದರಲ್ಲಿ ಒಂದು ಭಾಗ. ಇವೆಲ್ಲ ವ್ಯಾಪಕ ಆಗಲು ರಾಜಕೀಯ ಪಕ್ಷಗಳೂ ಕಾರಣವಾಗಿವೆ. ವಿರೋಧಿಸಿದಾಗ ಗಲಾಟೆಗಳಿಗೂ ಕಾರಣ ಆಗಿವೆ. ಆದ್ಯಾಗಿಯೂ ಬ್ರಾಹ್ಮಣೀಕರಣ ಮುಂದೆ ಪ್ರಬಲವಾಗಿ ಬೆಳೆಯುತ್ತದೆ ಎಂದರು.
ಇತ್ತೀಚೆಗೆ ಬಸವಣ್ಣನವರ ವಿಚಾರ ಧಾರೆ ವೇಗವಾಗಿ ಬೆಳಯುತ್ತಿದೆ. ಅದರ ವೇಗ ಕಡಿಮೆ ಮಾಡಲು ಹೀಗೆಲ್ಲ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಸತ್‍ನಲ್ಲಿ ಬಸವಣ್ಣನವರ ಕುರಿತು ಮಾತಾನಾಡಿದಾಗ ಬಸವ ತತ್ವ ಪ್ರಪಂಚಾದ್ಯಂತ ಹರಡುತ್ತಿದೆ ಎಂಬುದು ಗೊತ್ತಾಯಿತು. ಬಸವಣ್ಣ ವಿಶ್ವವ್ಯಾಪಿ ಆಗುವುದನ್ನು ತಡೆಗಟ್ಟಲು ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕುದೇರುಮಠದ ಶ್ರೀ ಗುರುಶಾಂತ ಸ್ವಾಮೀಜಿ ಮಾತನಾಡಿ, ಮಹಾಮಾನವತಾವಾದಿ ಬಸವಣ್ಣನವರಿಗೆ ಪಠ್ಯಪುಸ್ತಕ ಪರಿಷ್ಕರಣೆ ಮೂಲಕ ಅವಹೇಳನ ಮಾಡಲಾಗಿದೆ. ಮಕ್ಕಳ ಮನಸ್ಸಿನಲ್ಲಿ ಸುಳ್ಳು ಚರಿತ್ರೆಯನ್ನು ತುಂಬಲಾಗುತ್ತದೆ. ಇದನ್ನು ಸಹಿಸಲಾಗುವುದಿಲ್ಲ. ಈ ಕುರಿತು ಉಗ್ರ ಹೋರಾಟ ಮಾಡಲಾಗುವುದು ಎಂದು ಗುಡುಗಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಮಹಾದೇವಪ್ಪ ಮಾತನಾಡಿ, ಬಸವಣ್ಣನವರು ವರ್ಗ, ವರ್ಣ, ಲಿಂಗಬೇಧ, ಆಶ್ರಯರಹಿತ ಸಮಗ್ರ ಸಮಾಜ ನಿರ್ಮಾಣದ ರೂವಾರಿ. ಇಷ್ಟಲಿಂಗ ಜನಕ, ಲಿಂಗಾಯತ ಒಂದು ಅವೈದಿಕ ಸ್ವತಂತ್ರ ಧರ್ಮ. ಹೀಗಿದ್ದು ಉದ್ದೇಶಪೂರ್ವಕವಾಗಿ ಬಸವಣ್ಣ ವೀರಶೈವ ಗುರುಗಳಿಂದ ಲಿಂಗದೀಕ್ಷೆ ಪಡೆದರು ಎಂದು ತಪ್ಪು ಮಾಹಿತಿಯನ್ನು ಸೇರಿಸಲಾಗಿದೆ. ಇದು ಕೆಳಮಟ್ಟದ ರಾಜಕಾರಣ ಮತ್ತು ನೀಚತನದ್ದು ಎಂದು ಕಿಡಿಕಾರಿದರು.
ಪಠ್ಯಪುಸ್ತಕ ಪರಿಷ್ಕೃತ ಸಮಿತಿಯು ದುರುದ್ದೇಶದಿಂದ ಇತಿಹಾಸ ತಿರುಚುವ ಪ್ರಯತ್ನ ಮಾಡಿದೆ. ಬಸವಣ್ಣವರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ತಪ್ಪು ಮಾಹಿತಿ ಸೇರಿಸಲಾಗಿದೆ. ಇದನ್ನು ಪುನರ್ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು
ಸತ್ಯವನ್ನು ಮರೆಮಾಚಿ ಪಠ್ಯ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಾಚಾರ ಎಸಗಿದ್ದಾರೆ. ಸರ್ಕಾರವೂ ಕೂಡಲೇ ದೋಷಪೂರಿತ ಪಠ್ಯವನ್ನು ಸ್ಥಗಿತಗೊಳಿಸಿ, ತಜ್ಞರಿಂದ ಸೂಕ್ತ ತಿದ್ದುಪಡಿ ಮಾಡಿಸಿ ದೋಷಮುಕ್ತಗೊಳಿಸಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.
ಇತಿಹಾಸದ ಅರಿವಿಲ್ಲದ ವ್ಯಕ್ತಿಯನ್ನು ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾಗಿ ನೇಮಿಸಿದ್ದು ಅಚ್ಚರಿ. 12ನೇ ಶತಮಾನದಲ್ಲಿ ತಮ್ಮ ಅಸ್ವಿತ್ವಕ್ಕೆ ಧಕ್ಕೆ ಬಂದಾಗ ಬಸವಣ್ಣನವರ ವಿರುದ್ಧ ಅಪಪ್ರಚಾರ ಮಾಡಿದ್ದವರೇ ಈಗಲೂ ಬಸವ ತತ್ವಕ್ಕೆ ಅಪಚಾರ ಮಾಡುತ್ತಿರುವುದು ವಿಪರ್ಯಾಸ. ತಪ್ಪು ತಿದ್ದುಕೊಳ್ಳದಿದ್ದರೆ ನೇರ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ನಾವು ಕೂಡ ರಾಷ್ಟ್ರವಾದಿ, ದೇಶಭಕ್ತರು. ಆದರೆ, ಇತಿಹಾಸ ಮರೆಮಾಚುವ ಕೃತ್ಯವನ್ನು ಒಪ್ಪಲ್ಲ ಎಂದು ಕಿಡಿಕಾರಿದರು.
ಲಿಂಗಾಯತ ಮಹಾಸಭಾದ ಮುಖಂಡರೂ ಆದ ಬಿಜೆಪಿ ಮುಖಂಡ ಕೇಬಲ್ ಮಹೇಶ್ ಮಾತನಾಡಿ, ಬಸವಣ್ಣನವರ ವಿಚಾರಧಾರೆ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತದೆ. ಇದಕ್ಕೆ ಹೊಸ ಉದಾಹರಣೆ ಪಠ್ಯಪುಸ್ತಕ ಆವಾಂತರ. ಇದನ್ನು ಸರಿಪಡಿಸದಿದ್ದರೆ ಸರ್ಕಾರ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ಎಚ್ಚರಿದರು.
ಇತಿಹಾಸದ ಕುರಿತು ಅಸತ್ಯ ಹೇಳಿ ಗೊಂದಲ ಸೃಷ್ಟಿಸಲಾಗುತ್ತದೆ. ಇದು ಸರ್ಕಾರಕ್ಕೂ ಮುಜುಗರ ತಂದಿದೆ. ಬಸವಣ್ಣನವರ ಚರಿತ್ರೆಗೆ ಆಗಿರುವ ಅನ್ಯಾಯವನ್ನು ತಕ್ಷಣ ಸರಿಮಾಡಬೇಕು ಎಂದು ಆಗ್ರಹಿಸಿದರು.
ಮಹಾಸಭಾದ ಪದಾಧಿಕಾರಿ ಶಿವಲಿಂಗಪ್ಪ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಸೂತ್ರದಾರ ಮತ್ತು ಮಾರ್ಗದರ್ಶಕರು ಶಿಕ್ಷಣ ಸಚಿವರು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಲೋಪವನ್ನು ಸರಿಪಡಿಸುವ ಬದಲಿಗೆ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇದು ಸಚಿವರ ಚಿತಾವಣೆಯಿಂದಲೇ ಈ ಕೆಲಸವಾಗಿದೆ ಎಂದು ಆರೋಪಿಸಿದರು.
ದೇವಾಲಪುರಮಠದ ಶ್ರೀ ಜಡೇಸ್ವಾಮೀಜಿ, ಬಸಳ್ಳಿಹುಂಡಿಯ ಶೀ ಬಸವರಾಜ ಸ್ವಾಮೀಜಿ, ಮಹಾಸಭಾದ ಪದಾಧಿಕಾರಿಗಾದ ಎಂ.ಮಾರಪ್ಪ, ಸಿದ್ದಲಿಂಗಸ್ವಾಮಿ, ಶಿವಮಲ್ಲಪ್ಪ ಇನ್ನಿತರರರು ಇದ್ದರು.







